ಬೆಂಗಳೂರು: ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ನಗರ ಸಂಚಾರ ಪೊಲೀಸರು ರಾಜಧಾನಿಯಲ್ಲಿ ಶೇ.92ರಷ್ಟು ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸಂಪರ್ಕರಹಿತವಾಗಿ ದಾಖಲಿಸಿದ್ದಾರೆ. ಶೇ 8ರಷ್ಟು ಮಾತ್ರ ಭೌತಿಕವಾಗಿ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ಅವರು ವಿವರವಾದ ಮಾಹಿತಿ ನೀಡಿದ್ದಾರೆ.
ಸಂಪರ್ಕ ಹಾಗೂ ಸಂಪರ್ಕರಹಿತ ಪ್ರಕರಣಗಳು 2018ರಲ್ಲಿ ಶೇ.62 ಹಾಗೂ 38ರಷ್ಟು ದಾಖಲಾಗಿತ್ತು. ಆದರೆ, ಕಳೆದ ವರ್ಷ ಶೇ.8ರಷ್ಟು ಮಾತ್ರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಉಳಿದ ಶೇ.92 ರಷ್ಟು ಪ್ರಕರಣಗಳು ನಿಯಮ ಉಲ್ಲಂಘಿಸಿದವರ ವಿವೇಚನೆಗೆ ಬಾರದಂತೆ ಸಿಸಿ ಕ್ಯಾಮರಗಳೇ ಸೆರೆಹಿಡಿದಿವೆ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಾಖಲಾಗುವ ಸಂಪರ್ಕರಹಿತ ಪ್ರಕರಣಗಳನ್ನು ಶೇ 100ಕ್ಕೆ ತರುವ ಉದ್ದೇಶವಿದೆ ಎಂದರು.
ಕಳೆದ ವರ್ಷ ಸಂಗ್ರಹವಾದ ದಂಡ ಎಷ್ಟು?: ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಅತಿ ಹೆಚ್ಚು ದಂಡ ಸಂಗ್ರಹಿಸಲಾಗಿದೆ. 179 ಕೋಟಿ ರೂ ದಂಡವನ್ನು ಒಂದೇ ವರ್ಷದಲ್ಲಿ ವಸೂಲಿ ಮಾಡಲಾಗಿದೆ. 2021 ರಲ್ಲಿ 140 ಕೋಟಿ, 2018, 2019 ಮತ್ತು 2020ರಲ್ಲಿ ಅನುಕ್ರಮವಾಗಿ 81, 89 ಹಾಗೂ 99 ಕೋಟಿ ದಂಡ ಸಂಗ್ರಹಿಸಲಾಗಿದೆ.
ಒಂದು ವರ್ಷದಲ್ಲಿ ಸಂಭವಿಸಿದ ಅಪಘಾತಗಳೆಷ್ಟು?:2020- 2021 ನೇ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇತ್ತು. ದೇಶದಲ್ಲಿ ಕೊರೊನಾ ಲಾಕ್ಡೌನ್ ಇದ್ದ ಕಾರಣ ಅಷ್ಟಾಗಿ ಅಪಘಾತಗಳು ಸಂಭವಿಸಿರಲಿಲ್ಲ. ಅನುಕ್ರಮವಾಗಿ 3,236 ಮತ್ತು 3,213 ಅಪಘಾತಗಳಾಗಿತ್ತು. ಈ ಸಂಖ್ಯೆಗಳಿಗೆ ಹೋಲಿಸಿದರೆ 2022ರಲ್ಲಿ ಸಹಜ ಪರಿಸ್ಥಿತಿ ಇದ್ದೂ ಅಪಘಾತಗಳ ಸಂಖ್ಯೆ 3827ಕ್ಕೇರಿಕೆಯಾಗಿದೆ. 2018 ರಲ್ಲಿ ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಪ್ರತಿ 10 ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತ್ತಿದ್ದವು. 2022ನೇ ಸಾಲಿನಲ್ಲಿ ಈ ಅನುಪಾತವು 3.5ಕ್ಕೆ ಇಳಿದಿದೆ. ವಾಹನಗಳ ಏರುಗತಿಗೆ ಹೋಲಿಸಿದಾಗ ನಗರದ ಅಪಘಾತಗಳ ಸಂಖ್ಯೆ ಕಡಿಮೆಯಾಗಿವೆ.