ಕರ್ನಾಟಕ

karnataka

ETV Bharat / state

Bengaluru Traffic: ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಇಂದಿನಿಂದ ಡ್ರೋನ್ ಕ್ಯಾಮರಾಗಳ ಪ್ರಾಯೋಗಿಕ ಹಾರಾಟ - ಈಟಿವಿ ಭಾರತ ಕನ್ನಡ

ಸಂಚಾರ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಟ್ರಾಫಿಕ್​ ಪೊಲೀಸರು ಡ್ರೋನ್​ ಬಳಕೆ ಮಾಡಲು ಮುಂದಾಗಿದ್ದಾರೆ.

drone-camera-to-control-traffic-in-bengaluru
ಟ್ರಾಫಿಕ್ ಕಂಟ್ರೋಲ್ ಮಾಡಲು ಇಂದಿನಿಂದ ಪ್ರಾಯೋಗಿಕ ಹಾರಾಟ ನಡೆಸಲಿದೆ ಡ್ರೋನ್ ಕ್ಯಾಮರಾ

By

Published : Jun 19, 2023, 3:57 PM IST

ನಗರ ಸಂಚಾರ ವಿಭಾಗ ಡಿಐಜಿ ಎಂ.ಎನ್.ಅನುಚೇತ್ ವಿವರಣೆ

ಬೆಂಗಳೂರು: ಬೆಂಗಳೂರು ನಗರದ ವಿಪರೀತ ಸಂಚಾರ ದಟ್ಟಣೆಯನ್ನು ಶತಾಯಗತಾಯ ಕಡಿಮೆ‌ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಣ ತೊಟ್ಟಿರುವ ಸಂಚಾರಿ ಪೊಲೀಸರು ಡ್ರೋನ್ ಕ್ಯಾಮರಾಗಳ ಮೊರೆ ಹೋಗಿದ್ದಾರೆ. ಜನಸಂದಣಿ‌ ಹಾಗೂ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಪ್ರಮುಖವಾಗಿ ಪೀಕ್​ ಅವರ್‌ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಡ್ರೋನ್ ಕ್ಯಾಮರ ಬಳಸಲು ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ಇಂದಿನಿಂದಲೇ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ.

ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹೆಬ್ಬಾಳ, ಗೊರಗುಂಟೆಪಾಳ್ಯ, ಟಿನ್ ಫ್ಯಾಕ್ಟರಿ ಬಿಡ್ಜ್, ಬನಶಂಕರಿ, ಸಾರಕ್ಕಿ ಜಂಕ್ಷನ್, ಇಬ್ಬಲೂರು ಹಾಗೂ ಟ್ರಿನಿಟಿ ವೃತ್ತ ಸೇರಿದಂತೆ 20 ಹೆಚ್ಚು ಜಂಕ್ಷನ್​ಗಳನ್ನು ಗುರುತಿಸಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಈಗಾಗಲೇ ಎಂಟು ಡ್ರೋನ್ ಕ್ಯಾಮರಾ ಖರೀದಿಸಲಾಗಿದೆ‌. ಈ ಪೈಕಿ 4 ಡ್ರೋನ್​ಗಳು ಸಂಚಾರ ವಿಭಾಗಕ್ಕೆ ಹಂಚಿಕೆಯಾಗಿದೆ. ಎಲ್ಲೆಲ್ಲಿ ಸಂಚಾರ ದಟ್ಟಣೆಯಾಗಲಿದೆಯೋ ಅಂತಹ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾ ಬಳಕೆಯಿಂದ ಎಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಲಿದೆ ಎಂಬುದರ ಬಗ್ಗೆ ಗೊತ್ತಾಗಲಿದೆ. ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪೊಲೀಸರಿಗೆ ಗೊತ್ತಾಗುವುದಿಲ್ಲ. ಡ್ರೋನ್ ಕ್ಯಾಮರಾ ಬಳಕೆಯಿಂದ ಎಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿರುವ ಬಗ್ಗೆ ಮಾಹಿತಿ ಗೊತ್ತಾಗಲಿದೆ. ಇದೇ ಮಾಹಿತಿಯನ್ನು ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಕಳುಹಿಸಲಾಗುತ್ತದೆ. ಅಲ್ಲಿಂದ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ಪಡೆದು ಟ್ರಾಫಿಕ್ ಡೈವರ್ಷನ್​ ಮಾಡಲಾಗುತ್ತದೆ. ಡ್ರೋನ್ ಬಳಕೆ ಬಗ್ಗೆ ಟ್ರಾಫಿಕ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ನಗರ ಸಂಚಾರ ವಿಭಾಗ ಡಿಐಜಿ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್​ ಮುಕ್ತ ಸಿಟಿಗೆ ಗೃಹ ಸಚಿವರ ಸೂಚನೆ: ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ‌ ಅಪಖ್ಯಾತಿಗೆ ಒಳಗಾಗಿದೆ. ಮೂರು ತಿಂಗಳ ಒಳಗಾಗಿ ನಗರದ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದರು. ಈ ಬಗ್ಗೆ ಎಸಿಪಿ ಮೇಲ್ಮಟ್ಟದ ಪೊಲೀಸ್​ ಅಧಿಕಾರಿಗಳೊಂದಿಗೆ ನಗರ ಪೊಲೀಸ್ ಇಲಾಖೆಯ ಕಾರ್ಯಗಳ ಬಗ್ಗೆ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದಾಗಿ ವಿಶ್ವಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿದೆ.‌ ಸಂಚಾರ ದಟ್ಟಣೆ ಸಂಪೂರ್ಣವಾಗಿ ಕಡಿಮೆ ಮಾಡಲು ಆಯಾ ವಿಭಾಗದ ಪೊಲೀಸರು ಪೀಕ್ ಅವರ್‌ನಲ್ಲಿ ಕಡ್ಡಾಯವಾಗಿ ಸ್ಥಳದಲ್ಲಿರಬೇಕು.‌ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್‌ ಸುಧಾರಿಸಲು ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರಾ ಬಳಸಲಾಗುತ್ತದೆ ಎಂದು ಹೇಳಿದ್ದರು.

ಟ್ರಾಫಿಕ್ ಜಾಮ್​ ಆಗುವ ಪ್ರದೇಶಗಳಲ್ಲಿ ಸರ್ವೆಲೆನ್ಸ್‌ ಮಾಡುವುದಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್​ಗಳನ್ನು ಬಳಸಲಾಗುತ್ತಿದೆ. ಅಲ್ಲದೆ‌‌ ಪೀಕ್ ಅವರ್‌ನಲ್ಲಿ‌ ಸಂಚಾರ ದಟ್ಟಣೆ ಸುಧಾರಿಸಲು ಟ್ರಾಫಿಕ್ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 10 ಮಂದಿ ಕಾನೂನು ವಿಭಾಗದ ಪೊಲೀಸರು ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ರಾಜಧಾನಿಯಲ್ಲಿ‌ ಸಂಚಾರ ದಟ್ಟಣೆಯ ದೂರುಗಳು ಬರದಂತೆ‌ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ಸಿಟಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.

ಇದನ್ನೂ ಓದಿ :ಬೆಂಗಳೂರಿನ ಸಂಚಾರದಟ್ಟಣೆ ಸಮಸ್ಯೆ ಪರಿಹಾರಕ್ಕೆ 10-15 ದಿನದೊಳಗೆ ತೀರ್ಮಾನ: ಡಿ.ಕೆ.ಶಿವಕುಮಾರ್

ABOUT THE AUTHOR

...view details