ಬೆಂಗಳೂರು:ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಆಫೀಸ್ಗೆ ಲೇಟಾಯ್ತು, ಖಾಸಗಿ ಕಂಪನಿಯ ಉದ್ಯೋಗಿ ಎಂದು ಐಡಿ ಕಾರ್ಡ್ ತೋರಿಸಿ ಸಬೂಬು ಹೇಳುವ ಮುನ್ನ ಬೆಂಗಳೂರು ಟೆಕ್ಕಿಗಳೇ ಎಚ್ಚರ ವಹಿಸಿ. ಏಕೆಂದರೆ, ಸಂಚಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರಣ ನೀಡುವವರ ಕಂಪನಿಗಳಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು ಬೆಂಗಳೂರು ಸಂಚಾರ ಪೊಲೀಸರು ಆರಂಭಿಸಿದ್ದಾರೆ.
ವೇಗದ ಚಾಲನೆ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕಾರಣಗಳನ್ನು ನೀಡುವವರ ಕುರಿತು ಅವರ ಕಂಪನಿಗಳಿಗೆ ಇ-ಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಜೊತೆಗೆ ಅವರ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಖಾಸಗಿ ಕಂಪನಿಗಳು ಹೆಚ್ಚಿರುವ ಸಂಚಾರ ಪೂರ್ವ ವಿಭಾಗ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಈಗಾಗಲೇ ಪೊಲೀಸರು ಈ ಕೆಲಸಕ್ಕೆ ಮುಂದಾಗಿದ್ದಾರೆ.
''ನಿಯಮ ಉಲ್ಲಂಘಿಸಿ ಕಾರಣ ನೀಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿ ಮಾಹಿತಿ ಪಡೆಯುವ ಕೆಲಸ ಆರಂಭಿಸಿದ್ದೇವೆ. ಮತ್ತಷ್ಟು ಸವಾಲುಗಳಿವೆ. ಪ್ರಾಯೋಗಿಕವಾಗಿ ಸಂಚಾರ ಪೂರ್ವ ವಿಭಾಗಕ್ಕೆ ಈ ನಿಯಮ ಜಾರಿಗೊಳಿಸಲಾಗಿದ್ದು, ಈ ಭಾಗದಲ್ಲಿ ಯಶಸ್ವಿಯಾದರೆ ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸುವ ಕುರಿತು ಚಿಂತಿಸಲಾಗುವುದು'' ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಬೈಕ್ ನಂಬರ್ಪ್ಲೇಟ್ಗೆ ಮಾಸ್ಕ್ ತೊಡಿಸಿದ್ದ ಸವಾರನ ವಿರುದ್ಧ ಪ್ರಕರಣ ದಾಖಲು
ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ತಂದೆಗೆ ದಂಡ ವಿಧಿಸಿದ ಕೋರ್ಟ್: ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ 10 ಸಾವಿರದ 500 ರೂಪಾಯಿ ಮತ್ತು ಬಾಲಕನಿಗೆ 9 ಸಾವಿರ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಎನ್ಆರ್ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಾಹನ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿದ್ದಾನೆ. ವಾಹನ ಚಾಲನಾ ಪರವಾನಗಿ ಹಾಗೂ ವಾಹನದ ದಾಖಲಾತಿ ಪರಿಶೀಲಿಸಿದಾಗ ವಾಹನ ಸವಾರ ಅಪ್ರಾಪ್ತನಾಗಿರುವುದು ಕಂಡು ಬಂದಿದ್ದು, ನ್ಯಾಯಾಲಯಕ್ಕೆ ಈ ಬಗ್ಗೆ ಚಾರ್ಜ್ಶೀಟ್ ಅನ್ನು ಎನ್ಆರ್ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸಲ್ಲಿಸಿದ್ದರು.
ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಪ್ರಕರಣವನ್ನು ಆಲಿಸಿ, ಮಹತ್ವದ ಆದೇಶ ಹಾಗೂ ತೀರ್ಪು ನೀಡಿದ್ದು, ಬಾಲಕನಿಗೆ 9 ಸಾವಿರ ಹಾಗೂ ಆತನ ತಂದೆಗೆ 10 ಸಾವಿರದ 500 ರೂಪಾಯಿ ಪ್ರತ್ಯೇಕವಾಗಿ ದಂಡ ವಿಧಿಸಿದ್ದಾರೆ. ವಾಹನ ಚಾಲನಾ ಪರವಾನಗಿ ಇಲ್ಲದವರಿಗೆ ವಾಹನಗಳನ್ನು ಚಲಾಯಿಸಲು ಕೊಡದಂತೆ ಪಿಎಸ್ಐ ಬಿ.ಎಸ್.ನಿರಂಜನ್ ಕುಮಾರ್ ಎಚ್ಚರಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಿರುವ ಎನ್ಆರ್ಪುರ ಪೊಲೀಸರು ನಿತ್ಯ ವಾಹನ ಪರವಾನಿಗೆ ಹಾಗೂ ಅಪ್ರಾಪ್ತರ ಬೈಕ್ ಚಲಾಯಿಸುವ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮವನ್ನು ಜರುಗಿಸುತ್ತಿದ್ದಾರೆ.