ಬೆಂಗಳೂರು: ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಟೆಕ್ಕಿ ಕುಟುಂಬದ ನಾಲ್ವರ ಸಾವಿಗೆ ಷೇರು ವ್ಯವಹಾರದ ನಷ್ಟವೇ ಕಾರಣ ಎಂಬುದು ಪೊಲೀಸರ ತನಿಖೆ ವೇಳೆ ಕಂಡು ಬಂದಿದೆ. ಪತ್ನಿ ಹಾಗೂ ಮಕ್ಕಳನ್ನ ಹತ್ಯೆ ಮಾಡಿದ ಬಳಿಕ ಪತಿ ಮೂರು ದಿನ ಶವಗಳ ಜೊತೆಯೇ ಕಳೆದು ಬಳಿಕ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31) ಆತನ ಪತ್ನಿ ಹೇಮಾವತಿ (29) ಮಕ್ಕಳಾದ ಎರಡೂವರೆ ವರ್ಷದ ಮೋಕ್ಷ ಹಾಗೂ 8 ತಿಂಗಳ ಮಗು ಸೃಷ್ಟಿ ಸುನಯನ ಮೃತಪಟ್ಟಿದ್ದ ದುರ್ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ನಡೆದಿತ್ತು. ಆರು ವರ್ಷಗಳ ಹಿಂದೆ ಹೇಮಾವತಿಯೊಂದಿಗೆ ಮದುವೆಯಾಗಿದ್ದ ವೀರಾರ್ಜುನ ವಿಜಯ್ ಕಾಡುಗೋಡಿಯ ಸಿಗೇಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.
ಷೇರು ವ್ಯವಹಾರದ ನಷ್ಟ:ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿರಾರ್ಜುನ ವಿಜಯ್ ಕುಂದಲಹಳ್ಳಿ ಬಳಿಯಿರುವ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಷೇರು ವ್ಯವಹಾರದಲ್ಲಿ ತೊಡಗಿದ್ದ ಅವರು ಸಂಬಳ ಮಾತ್ರವಲ್ಲದೇ ಸಾಲ ಮಾಡಿ ಷೇರು ವ್ಯವಹಾರದಲ್ಲಿ ತೊಡಗಿಸಿ ನಷ್ಟ ಅನುಭವಿಸಿದ್ದರು. ವೀರಾರ್ಜುನ ವಿಜಯ್ ಅವರರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಪರಿಶೀಲಿಸಿದಾಗ ಅವರು ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿದ್ದ ವಿಚಾರ ತಿಳಿದು ಬಂದಿದೆ.