ಬೆಂಗಳೂರು:ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್-2020ರ ಎರಡನೇ ದಿನವಾದ ಇಂದು ರಾಜ್ಯವು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಎಂಟು ದೇಶಗಳ ಜತೆ ಮಹತ್ವದ ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ.
ನವೋದ್ಯಮಗಳ ಸ್ಥಾಪನೆ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಎಕೋಸಿಸ್ಟಮ್ ಕನೆಕ್ಟ್, ಲೈಫ್ ಸೈನ್ಸ್, ಜೈವಿಕ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ, ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ದೇಶಗಳ ಜತೆ ಕರ್ನಾಟಕವು ಅಂಕಿತ ಹಾಕಿದೆ.
ಐಟಿ - ಬಿಟಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವರ್ಚುಯಲ್ ವೇದಿಕೆಯ ಮೂಲಕ ಒಪ್ಪಂದಗಳಿಗೆ ಅಧಿಕೃತ ಮುದ್ರೆ ಬಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು, "ಅಂಕಿತ ಬಿದ್ದಿರುವ ಎಲ್ಲ ಒಪ್ಪಂದಗಳು ಎರಡೂ ಕಡೆಗಳ ಹಿತಾಸಕ್ತಿಗೆ ಪೂರಕವಾಗಿದ್ದು, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ. ಕರ್ನಾಟಕವು ಜಗತ್ತಿನ ಜತೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಕುದುರಿಸಿದಂತಾಗಿದೆ" ಎಂದರು.
ಒಪ್ಪಂದಗಳ ವಿವರ:
1. ಕರ್ನಾಟಕ ಮತ್ತು ಫಿನ್‌ಲ್ಯಾಂಡ್: ಹೊಸ ಸ್ಟಾರ್ಟಪ್‌ಗಳ ಸ್ಥಾಪನೆ, ಪರಸ್ಪರ ಕೌಶಲ್ಯಾಭಿವೃದ್ಧಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ- ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯದ ಸೆಂಟರ್ ಆಫ್ ಎಕ್ಸ್‌ಲೆನ್ಸಿ ಫಾರ್ ಡಾಟ್ ಸೈನ್ಸ್ ಸಂಸ್ಥೆಯು ಫಿನ್ಲ್ಯಾಂಡ್ನ ಬಿಸಿನೆಸ್ ಫಿನ್‌ಲ್ಯಾಂಡ್ ಸಂಸ್ಥೆ ಜತೆ ಒಡಂಬಡಿಕೆಗೆ ಸಹಿ ಹಾಕಿತು. ಈ ಸಂಸ್ಥೆಯು ಫಿನ್ಲ್ಯಾಂಡ್ನ ಒಂದು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾಗಿದ್ದು, ನವೋದ್ಯಮ ಹಾಗೂ ಜಾಗತಿಕ ಸೇವಾ ವಲಯದಲ್ಲಿ ಹೂಡಿಕೆ ಮಾಡುತ್ತದೆ. ಇದು ಬಲಿಷ್ಠವಾದ ಜಾಗತಿಕ ಜಾಲವನ್ನು ಹೊಂದಿದ್ದು, ಕರ್ನಾಟಕದಲ್ಲಿ ಹೂಡಿಕೆ ಮಾಡಲಿದೆ. ಕೃಷಿ, ಸಾರಿಗೆ, ಆರೋಗ್ಯ, ಭದ್ರತೆ, ಸೇವೆ, ಆಡಳಿತ ಸೇರಿ ಹಲವು ರಂಗಗಳಲ್ಲಿ ಇದು ರಾಜ್ಯದ ಕೆಲಸ ಮಾಡಲಿದೆ.
2.ಕರ್ನಾಟಕ ಮತ್ತು ಸ್ವೀಡನ್: ಐಟಿ - ಬಿಟಿ ಇಲಾಖೆ ಅಧೀನದ ಸೆಂಟರ್ ಆಫ್ ಎಕ್ಸಲೆನ್ಸ್ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಸ್ವೀಡಿಷ್ ಇನ್ಕ್ಯೂಬೇಟರ್ಸ್ ಅಂಡ್ ಸೈನ್ಸ್ ಪಾರ್ಕ್ (SISP)ನಡುವೆ ಮಹತ್ವದ ಒಪ್ಪಂದವಾಗಿದೆ. ಕೈಗಾರಿಕೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ಸ್ಟಾರ್ಟಪ್‌ಗಳ ಸ್ಥಾಪನೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು, ಎಕೋಸಿಸ್ಟಮ್ ಕನೆಕ್ಟ್, ತಂತ್ರಜ್ಞಾನ ಮತ್ತು ವೈಜ್ಞಾನಿಕ ಮಾಹಿತಿ ಹಂಚಿಕೆ ವಿಭಾಗದಲ್ಲಿ ಕರ್ನಾಟಕ ಮತ್ತು ಸ್ವೀಡನ್ ದೇಶಗಳು ಸಹಮತಕ್ಕೆ ಬಂದು ಅಂಕಿತ ಹಾಕಿವೆ. ಸ್ವೀಡಿಷ್ ಇನ್ಕ್ಯೂಬೇಟರ್ಸ್ ಅಂಡ್ ಸೈನ್ಸ್ ಪಾರ್ಕ್, ಸ್ವೀಡನ್ ದೇಶದ ಪ್ರತಿಷ್ಠಿತ ಸೈನ್ಸ್ ಪಾರ್ಕ್ ಆಗಿದ್ದು, ಜಾಗತಿಕವಾಗಿ ಅಸ್ತಿತ್ವವನ್ನು ಹೊಂದಿದ್ದು, ಯುರೋಪಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ನವೋದ್ಯಮಗಳ ಸ್ಥಾಪನೆ, ಸ್ಮಾರ್ಟ್ ಸಿಟಿ, ಆರೋಗ್ಯ, ಉತ್ಪಾದನೆ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಈ ಸಂಸ್ಥೆಯೂ ಕರ್ನಾಟಕದಲ್ಲಿ ಹೂಡಿಕೆ ಮಾಡಲಿದೆ.
3.ಕರ್ನಾಟಕ ಮತ್ತು ಅಮೆರಿಕ: ರಾಜ್ಯದ ಐಟಿಬಿಟಿ ಇಲಾಖೆ ಅಧೀನದಲ್ಲಿರುವ ಸೆಮಿ ಕಂಡಕ್ಟರ್ ಫ್ಯಾಬ್ಲೆಸ್ ಆಕ್ಸಲೇಟರ್ ಲ್ಯಾಬ್ (SFAL)ಮತ್ತು ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಜತೆ ಒಪ್ಪಂದ ಏರ್ಪಟ್ಟಿದೆ. ಅಮೆರಿಕದ ಈ ಸಂಸ್ಥೆಯು ಮೆಟೀರಿಯಲಿಸ್ಟಿಕ್ ಎಂಜಿನಿಯರಿಂಗ್ ಪರಿಹಾರಗಳು, ಸೆಮಿಕಂಡಕ್ಟರ್, ಫ್ಲಾಟ್ ಪ್ಯಾನಲ್, ಜೀವ ವಿಜ್ಞಾನ, ಆರೋಗ್ಯ ರಕ್ಷಣೆ, ಇಂಧನ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಅತ್ಯಂತ ಪ್ರಭಾವಶಾಲಿ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮಗಳನ್ನು ಸ್ಥಾಪಿಸುವಲ್ಲಿ ಈ ಸಂಸ್ಥೆಯು ರಾಜ್ಯದ ಜತೆ ಕೆಲಸ ಮಾಡಲಿದೆ. ESDM ವಲಯದಲ್ಲಿ ಹೂಡಿಕೆ ಮಾಡಲಿದೆ.
4.ಕರ್ನಾಟಕ ಮತ್ತು ಬ್ರಿಟನ್: ರಾಜ್ಯದ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಫಾರ್ ಡಾಟ ಸೈನ್ಸ್ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಬ್ರಿಟನ್ ಹೈಕಮೀಷನ್ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಖ್ಯವಾಗಿ ಸ್ಟಾರ್ಟಪ್, ಸಂಸೋಧನೆ-ಅಭಿವೃದ್ಧಿ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೆ ಸಂಸಬಂಧಿಸಿ ಈ ಒಪ್ಪಂದವಾಗಿದೆ. ನಾಗರಿಕ ಕೇಂದ್ರಿತ ಪರಿಹಾರಗಳು, ಸಾರ್ವಜನಿಕ ಸೇವೆ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ದತ್ತಾಂಶ ಸಂಯೋಜನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬ್ರಿಟನ್ ಕಡೆಯಿಂದ ರಾಜ್ಯದಲ್ಲಿ ಹೂಡಿಕೆಯಾಗಲಿದೆ.
5. ಕರ್ನಾಟಕ ಮತ್ತು ಇಂಡಿಯಾನ: ಐಟಿ - ಬಿಟಿ ಇಲಾಖೆ ಅಧೀನದ ಕರ್ನಾಟಕ ಇನೋವೇಶನ್ ಟೆಕ್ನಾಲಜಿ ಸೊಸೈಟಿ, ರಾಜ್ಯ ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆ ಹಾಗೂ ಅಮೆರಿಕದ ಇಂಡಿಯಾನಾ ರಾಜ್ಯದ ಆರ್ಥಿಕ ಅಭಿವೃದ್ಧಿ ನಿಗಮದ ಜತೆ ಈ ಒಪ್ಪಂದ ಆಗಿದೆ. ಉಳಿದಂತೆ ಆಟೋಮೋಟಿವ್, ವಿದ್ಯುತ್, ಸಂಪರ್ಕ, ಸಾರಿಗೆ, ಲೈಫ್ʼಸೈನ್ಸಸ್, ಜೈವಿಕ ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನತಂತ್ರಜ್ಞಾನ, ಕ್ರೀಡಾ ಆರ್ಥಿಕತೆ, ಶೈಕ್ಷಣಿಕ ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದವಾಗಿದೆ.
6.ಕರ್ನಾಟಕ ಮತ್ತು ವರ್ಜೀನಿಯಾ: ಐಟಿ - ಬಿಟಿ ಇಲಾಖೆ ಅಧೀನದ ಕರ್ನಾಟಕ ಇನೋವೇಷನ್ ಟೆಕ್ನಾಲಜಿ ಸೊಸೈಟಿ, ರಾಜ್ಯ ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆ ಹಾಗೂ ಅಮೆರಿಕದ ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯ ಆರ್ಥಿಕ ಅಭಿವೃದ್ಧಿ ಪ್ರಾಧಿಕಾರದ ನಡುವೆ ಈ ಒಪ್ಪಂದವಾಗಿದೆ. ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ಏರೋಸ್ಪೇಸ್ ಕ್ಷೇತ್ರಗಳಿಗೆ ಸಂಬಂಧಿಸಿ ಒಡಂಬಡಿಕೆಯಾಗಿದೆ. ಈ ಮೂಲಕ ಕೌಶಲ್ಯಾಭಿವೃದ್ಧಿ, ಕೃಷಿ ವಿಜ್ಞಾನ, ನವೋದ್ಯಮಗಳ ಸ್ಥಾಪನೆಗಾಗಿ ಹೂಡಿಕೆ ಹರಿದು ಬರಲಿದೆ.
7.ಕರ್ನಾಟಕ ಮತ್ತು ನೆದರ್‌ಲ್ಯಾಂಡ್ಸ್:ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ವ್ಯಾಪ್ತಿಯ ಸೆಂಟರ್ ಆಫ್ ಎಕ್ಸಲೆನ್ಸ್ ಸೈಬರ್ ಸೆಕ್ಯೂರಿಟಿ ಹಾಗೂ ಹೇಗ್ ಸೆಕ್ಯೂರಿಟಿ ಡೆಲ್ಟಾ ಸಂಸ್ಥೆ ಜತೆ ಈ ಒಪ್ಪಂದವಾಗಿದ್ದು, ಮುಖ್ಯವಾಗಿ ಇದು ಸೈಬರ್ ಸುರಕ್ಷತೆಗೆ ಸಂಬಂಧಿಸಿದ್ದಾಗಿದೆ. ಬಿಸ್ನೆಸ್ ನೆಟ್‌ವರ್ಕಿಂಗ್, ಜ್ಞಾನಾಧಾರಿತ ಸಂಸ್ಥೆಗಳು, ಜ್ಞಾನಾಭಿವೃದ್ಧಿ, ಭದ್ರತೆಯಲ್ಲಿ ಆವಿಷ್ಕಾರ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ನೆದರ್‌ಲ್ಯಾಂಡ್ಸ್ ಕೆಲಸ ಮಾಡಲಿವೆ. ಸ್ಟಾರ್ಟಪ್‌ಗಳು ಹಾಗೂ ಸೈಬರ್ ಸೆಕ್ಯೂರಿಟಿ ವಲಯದಲ್ಲಿ ಕೌಶಲ್ಯಾಭಿವೃದ್ಧಿ ಮಾಡುವುದೂ ಒಡಂಬಡಿಕೆಯಲ್ಲಿರುವ ಪ್ರಮುಖ ಅಂಶ.
8. ಕರ್ನಾಟಕ ಮತ್ತು ನೆದರ್‌ಲ್ಯಾಂಡ್ಸ್: ಐಟಿ-ಬಿಟಿ ಇಲಾಖೆ ಅಧೀನದ ಕರ್ನಾಟಕ ಇನೋವೇಶನ್ ಟೆಕ್ನಾಲಜಿ ಸೊಸೈಟಿ ಹಾಗೂ ಹೇಗ್ ಬಿಸಿನೆಸ್ ಏಜೆನ್ಸಿ ನಡುವೆ ಈ ಒಪ್ಪಂದವಾಗಿದೆ. ಹೇಗ್ ಬಿಸಿನೆಸ್ ಏಜೆನ್ಸಿಯು ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದ್ದು, ಲಾಭರಹಿತವಾಗಿ ಹಣಕಾಸು ನೆರವು ನೀಡಲಿದೆ. ಮುಖ್ಯವಾಗಿ ನವೋದ್ಯಮಗಳ ಸ್ಥಾಪನೆಗೆ ಇದು ನೆರವು ನೀಡಲಿದೆ. ಜತೆಗೆ ಆವಿಷ್ಕಾರ ಮೈತ್ರಿಕೂಟದ ದೇಶಗಳಿಗೆ ಮಾರುಕಟ್ಟೆ ಬೆಂಬಲ ನೀಡಿಕೆ ಹಾಗೂ ನೆಟ್‌ವರ್ಕಿಂಗ್ ಕ್ಷೇತ್ರಗಳಲ್ಲಿ ನೆದರ್‌ಲ್ಯಾಂಡ್ಸ್ ನೆರವಾಗಲಿದೆ. ಇದರಿಂದ ರಾಜ್ಯದ ಐಟಿ-ಬಿಟಿ ರಫ್ತು ವಹಿವಾಟಿಗೆ ಅನುಕೂಲವಾಗಲಿದೆ.
ಈ ಎಲ್ಲ ಒಪ್ಪಂದಗಳಿಗೆ ರಾಜ್ಯದ ಪರವಾಗಿ ಆಯಾ ಇಲಾಖೆಯ ಅಧಿಕಾರಿಗಳು ವರ್ಚುಯಲ್ ವೇದಿಕೆಯಲ್ಲಿ ಹಾಜರಿದ್ದು, ದಾಖಲೆಗಳನ್ನು ನೀಡಿದರೆ, ಅದೇ ರೀತಿ ಅವಿಷ್ಕಾರ ಮೈತ್ರಿಕೂಟದ ದೇಶಗಳ ಸ್ಥಳೀಯ ಕಾನ್ಸುಲೇಟ್‌ಗಳ ಹಿರಿಯ ಅಧಿಕಾರಿಗಳು ಅಂಕಿತ ಹಾಕಿ ದಾಖಲೆಗಳನ್ನು ಹಸ್ತಾಂತರ ಮಾಡಿದರು.