ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗುತ್ತಿದೆ. ಸಿಸಿಬಿ ಪೊಲೀಸರು ಇಂದು ಶಂಕಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ 7 ದಿನಗಳ ಕಾಲ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಏಳು ದಿನಗಳ ಕಾಲ ತೀವ್ರ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ತಲೆಮರೆಸಿಕೊಂಡಿರುವ ಜುನೈದ್ ಹಾಗೂ ಗ್ರೆನೇಡ್ ತಂದುಕೊಟ್ಟ ವ್ಯಕ್ತಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಕೆಲವರು ಶಂಕಿತರ ಜೊತೆ ಸಂಪರ್ಕದ ಶಂಕೆ ಇದ್ದು ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಕೇಳಲು ಸಿಸಿಬಿ ಸಿದ್ದತೆ ನಡೆಸುತ್ತಿದೆ. ಪ್ರಕರಣದ ಎ1 ಆರೋಪಿ ಉಗ್ರ ಟಿ.ನಜೀರ್‌ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಕಾರ್ಯಪ್ರವೃತ್ತವಾಗಿದ್ದು, ಜೈಲಿನಲ್ಲಿರುವ ಉಗ್ರ ನಜೀರ್ನ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ. ಪ್ರಕರಣದ ಎರಡನೇ ಆರೋಪಿ ಜುನೈದ್ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್‌ವಾಶ್ ಮಾಡಿದ್ದ ನಜೀರ್ 2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.
ಜು. 19ರಂದು ಬೆಂಗಳೂರಿನಲ್ಲಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬ ಉಗ್ರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೇಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.