ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ನಗರವನ್ನು ಪ್ರವೇಶಿಸುವ ಮಾರ್ಗಗಳಲ್ಲಿ ಸಂಚಾರ ಸಮಸ್ಯೆ ಅಧಿಕವಾಗುತ್ತಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವಾಹನಗಳ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸಾಧಕ-ಭಾದಕಗಳ ಬಗ್ಗೆ ಅಧ್ಯಯನ ನಡೆಸಿ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಸಲೀಂ ಆಶ್ವಾಸನೆ ನೀಡಿದರು.
ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಶತಾಯಗತಾಯ ಟ್ರಾಫಿಕ್ ಜಾಮ್ ಕಡಿಮೆಗೊಳಿಸಿ ಸುಗಮ ಸಂಚಾರಕ್ಕೆ ಅಣಿಗೊಳಿಸಲು ನಾನಾ ರೀತಿಯ ಕಸರತ್ತು ನಡೆಸಿದ್ದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಹೀಗಾಗಿ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಇದೇ ವಿಶೇಷ ಆಯುಕ್ತ ಹೊಸ ಹುದ್ದೆ ಸೃಷ್ಟಿಸಿ ಎಡಿಜಿಪಿ ಎಂ.ಸಲೀಂ ಅವರನ್ನು ಸರ್ಕಾರ ನಿಯೋಜಿಸಿದೆ. ಟ್ರಾಫಿಕ್ ದಟ್ಟಣೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲೀಂ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.
ನಗರ ಕೇಂದ್ರ ಭಾಗದಲ್ಲಿ ಪೀಕ್ ಅವರ್‌ನಲ್ಲಿ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಅಷ್ಟಾಗಿ ಸಂಚಾರ ಸಮಸ್ಯೆಯಿಲ್ಲ. ಅಗತ್ಯ ಕಡೆಗಳಲ್ಲಿ ಆತ್ಯಾಧುನಿಕ ಕ್ಯಾಮರ, ಸಿಗ್ನಲ್ ವ್ಯವಸ್ಥೆ ಸರಿಯಿದೆ. ಆದರೆ ನಗರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ದಿನೇ ದಿನೇ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಅನ್ಯ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವಾಹನ ಸವಾರರಿಗೆ ಬೆಂಗಳೂರಿನ ಬಗ್ಗೆ ನಕಾರಾತ್ಮಕ ಚಿಂತನೆ ಮೂಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಯಾ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.