ದೇವನಹಳ್ಳಿ: 12 ವರ್ಷದ ಹಿಂದೆ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದು, ಸದ್ಯ ಮಡಿವಾಳದ ಎಫ್ಎಸ್ಎಲ್ ಕಚೇರಿಗೆ ಕರೆತಂದಿದ್ದಾರೆ.
2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಉಗ್ರ ಕೇರಳ ಮೂಲದ ಶೋಯೆಬ್ ಫೈಜಲ್ (ಪ್ರಕರಣದ 32 ನೇ ಆರೋಪಿ) ಪತ್ತೆಗಾಗಿ ಸಿಸಿಬಿ ಪೊಲೀಸರು ಸಾಕಷ್ಟು ಹುಡುಕಾಡುತ್ತಿದ್ದರು. ರೆಡ್ ಕಾರ್ನರ್ ನೋಟಿಸ್ ಸಹ ಹೊರಡಿಸಲಾಗಿತ್ತು. ಆತನ ಸುಳಿವು ಸಿಕ್ಕ ಬಳಿಕ ಸಿಸಿಬಿಯ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಕೊಚ್ಚಿನ್ಗೆ ತೆರಳಿದ ತಂಡ ಉಗ್ರ ಶೋಯಬ್ನನ್ನು ಬಂಧಿಸಿದ್ದಾರೆ.
ವಶಕ್ಕೆ ಪಡೆದ ಉಗ್ರನನ್ನು ಇಂದು ಬೆಳಗ್ಗೆ 6:40 ರ ಇಂಡಿಗೋ ವಿಮಾನದಲ್ಲಿ ಕೇರಳದ ಕೊಚ್ಚಿನ್ನಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇಲ್ಲಿಂದ ಬಿಗಿ ಭದ್ರತೆಯಲ್ಲಿ ಎಫ್ಎಸ್ಎಲ್ಗೆ ಕರೆದೊಯ್ಯಲಾಗಿದ್ದು, ಕೋವಿಡ್ ಪರೀಕ್ಷೆ ಬಳಿಕ ಈತನಿಂದ ಮಹತ್ವದ ಮಾಹಿತಿಯನ್ನ ಕಲೆಹಾಕಲಿದ್ದಾರೆ.
ಪೊಲೀಸರಿಗೆ ಸಿಕ್ಕಿಬಿದ್ದ ಶಂಕಿತ ಉಗ್ರ ಕೇರಳ ಮೂಲದ ಶೋಯೆಬ್ ಫೈಜಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಸ್ಫೋಟವಾದ ಐದು ದಿನಗಳ ನಂತರ ಕೇರಳಕ್ಕೆ ಪರಾರಿ ಆಗಿ ನಂತರ ಅಲ್ಲಿಂದ ದುಬೈಗೆ ಹೋಗಿದ್ದ. ತನ್ನ ಪಾಪದ ಕೆಲಸ ಮರೆಮಾಚಲು ದುಬೈನಲ್ಲಿ ಖಾಸಗಿ ಶಾಲೆಯಲ್ಲಿ ಅಕೌಂಟೆಂಟ್ ಆಗಿ ಸುಮಾರು 12 ವರ್ಷ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮಡಿವಾಳ, ಬ್ಯಾಟರಾಯನಪುರದಲ್ಲಿ 2 ಪ್ರಕರಣ, ಆಶೋಕನಗರದಲ್ಲಿ 2 ಪ್ರಕರಣ, ಕೋರಮಂಗಲ, ಕೆಂಗೇರಿ, ಸಂಪಂಗಿರಾಮನಗರ ಹಾಗೂ ಆಡುಗೋಡಿಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಎಟಿಸಿ ಘಟನೆ ನಡೆದ ದಿನದಿಂದ ವಿಂಗ್ ಕಾರ್ಯಾಚರಣೆಗೆ ಇಳಿದು ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿನ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಫೈಜಲ್ ಅನ್ನೋ ಹೆಸರಿನಲ್ಲಿ ಫ್ಲೈಟ್ ಟಿಕೇಟ್ ಬುಕ್ ಮಾಡಿರುವ ವಿಚಾರ ತನಿಖಾಧಿಕಾರಿಗಳಿಗೆ ತಿಳಿದುಬಂದಿತ್ತು. ಹೀಗಾಗಿ ತ್ರಿವೇಂಡ್ರಮ್ ಏರ್ಪೋರ್ಟ್ಗೆ ಎಟಿಸಿ ವಿಂಗ್ ಭೇಟಿ ಮಾಡಿ ಶೋಯೆಬ್ಅನ್ನು ಬಂಧಿಸಲು ಮುಂದಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಈತನ ವಿಚಾರಣೆಯಿಂದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ. ಈತ ಹಲವಾರು ಕಡೆ ಇದೇ ರೀತಿ ಕೃತ್ಯವೆಸಗಿರುವ ಶಂಕೆ ಪೊಲೀಸರಿಗೆ ಇದ್ದು, ಸದ್ಯ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿ ಬಹುತೇಕ ಮಾಹಿತಿ ಕಲೆಹಾಕಲಿದ್ದಾರೆ.