ಬೆಂಗಳೂರು:ಗಣೇಶ ವಿಗ್ರಹಗಳ ಮಾರಾಟಕ್ಕೆ ಬೆಂಗಳೂರು ನಗರ ಹೆಸರುವಾಸಿ. ಅದರಲ್ಲೂ ಗಣೇಶ ಚತುರ್ಥಿ ಸಂದರ್ಭದಲ್ಲಿ ಇಲ್ಲಿನ ಆರ್ವಿ ರಸ್ತೆಯು ಮೂರ್ತಿಗಳಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ಮಹಾನಗರದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ವಿಗ್ರಹ ಕೊಂಡುಕೊಳ್ಳಲು ಆರ್ವಿ ರಸ್ತೆಗೆ ಜನರು ಬರುತ್ತಾರೆ.
ಕಳೆದ ಎರಡು ವರ್ಷಗಳಿಂದ ವ್ಯಾಪಾರವೇ ಇಲ್ಲದೆ ಕಂಗೆಟ್ಟಿದ್ದ ವರ್ತಕರು ಈ ಸಲ ಹೆಚ್ಚಿನ ಮೂರ್ತಿಗಳು ಮಾರಾಟವಾಗುವ ನಿರೀಕ್ಷೆಯಲ್ಲಿದ್ದಾರೆ. ಮಾರಾಟಗಾರರು ಹಾಗೂ ಕೊಳ್ಳುವವರ ನಡುವಿನ ಕೊಂಡಿಯಾಗಿ ಆರ್ವಿ ರಸ್ತೆ ಕಳೆದ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಪ್ರತಿವರ್ಷ 50 ರೂಪಾಯಿಯಿಂದ ಆರಂಭಗೊಂಡು 5 ಲಕ್ಷಕ್ಕೂ ಹೆಚ್ಚು ಮೊತ್ತದ ಗಣೇಶ ಮೂರ್ತಿಗಳೂ ಕೂಡ ಮಾರಾಟವಾಗುತ್ತವೆ.
ಅಲ್ಲದೆ, ಅರ್ಧ ಅಡಿಯಿಂದ 10 ಅಡಿಗೂ ಹೆಚ್ಚು ಎತ್ತರದ ವಿಘ್ನವಿನಾಶಕನ ಮೂರ್ತಿಗಳು ಇಲ್ಲಿ ಸಿಗುತ್ತವೆ. 5ರಿಂದ 6 ಮಂದಿ ವರ್ತಕರು ಮೂರ್ತಿ ಮಾರಾಟದಲ್ಲಿ ತೊಡಗಿದ್ದಾರೆ. ವಂಶ ಪಾರಂಪರ್ಯವಾಗಿ ಇದೇ ವ್ಯವಹಾರ ನಡೆಸಿಕೊಂಡು ಬಂದಿರುವ ಕುಟುಂಬಗಳು ಇಲ್ಲಿವೆ. ಶೇ. 70ರಷ್ಟು ಮೂರ್ತಿಗಳನ್ನು ಬೇರೆಡೆ ತಯಾರಿಸಿ ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತದೆ. ಉಳಿದ 30ರಷ್ಟು ಮೂರ್ತಿಗಳನ್ನು ಗ್ರಾಹಕರ ಆಶಯಕ್ಕೆ ತಕ್ಕಂತೆ ಇಲ್ಲಿಯೇ ಸಿದ್ಧಪಡಿಸುತ್ತಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಚಿಕ್ಕ ಮೂರ್ತಿಗಳು ಹಾಗೂ ಪಿಒಪಿಯಿಂದ ಸಿದ್ಧಗೊಂಡ ಬೃಹತ್ ಮೂರ್ತಿಗಳೂ ಇಲ್ಲಿ ಮಾರಾಟಕ್ಕಿವೆ.
ಕೋವಿಡ್ಗೂ ಮುನ್ನ ಒಂದು ಲೋಡ್ ಜೇಡಿಮಣ್ಣಿಗೆ 20ರಿಂದ 25 ಸಾವಿರ ರೂ. ಇತ್ತು. ಆದರೀಗ 40ರಿಂದ 80 ಸಾವಿರ ರೂ.ವರೆಗೆ ಏರಿಕೆಯಾಗಿದೆ. ಮೂರ್ತಿ ತಯಾರಿಸಲು ಕೆರೆಗಳಲ್ಲಿ ಸಿಗುವ ಒಳ್ಳೆಯ ಜೇಡಿಮಣ್ಣು ಅತ್ಯಗತ್ಯ. ನಗರದ ಆಸುಪಾಸು, ಕೋಲಾರದ ಗಡಿಯಲ್ಲಿ ಅಲ್ಪಸ್ವಲ್ಪ ಸಿಕ್ಕರೆ, ಉಳಿದ ಅಗತ್ಯ ಪ್ರಮಾಣದ ಮಣ್ಣನ್ನು ನೆರೆಯ ತಮಿಳುನಾಡಿನಿಂದ ತರಿಸಲಾಗುತ್ತಿದೆ. ಇದರಿಂದಲೇ ಹೆಚ್ಚಿನ ಗ್ರಾಹಕರು ಪಿಒಪಿ ಗಣೇಶನ ಮೊರೆ ಹೋಗುತ್ತಾರೆ. ಜೇಡಿಮಣ್ಣಿನಿಂದ ತಯಾರಾದ ಬೃಹತ್ ಮೂರ್ತಿಗಳನ್ನು ಸಾಗಿಸುವುದು ಹಾಗೂ ಕೊಂಡುಕೊಳ್ಳುವುದು ಕೂಡ ದುಬಾರಿ ಆಗುತ್ತದೆ ಎಂಬುದು ತಯಾರಕರ ಮಾತಾಗಿದೆ.