ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿಗಳು ತನಿಖಾ ತಂಡಕ್ಕೆ ಕೊಟ್ಟಿರುವ ಹೇಳಿಕೆಯ ಪ್ರಮುಖ ಅಂಶಗಳು ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಈಗಾಗಲೇ ಸಾಕಷ್ಟು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಂದೊಂದು ಆಯಾಮಗಳಲ್ಲಿ ಡಿ.ಜೆ.ಹಳ್ಳಿ ಠಾಣೆ ಹಾಗೂ ಚಾಮಾರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಗಲಭೆಗೆ ಪ್ರಮುಖ ಕಾರಣಗಳು:
1. ಬಾಬ್ರಿ ಮಸೀದಿ ಕೈ ತಪ್ಪಿದ್ದು ಗಲಭೆ ಸೃಷ್ಟಿಸಿದ ಆರೋಪಿಗಳಿಗೆ ಬೇಸರ ತರಿಸಿತ್ತು. ಇದು ಘಟನೆಗೆ ಮುಖ್ಯ ಕಾರಣವಾಗಿದೆ. ಹೀಗಾಗಿ ಅಕ್ಟೋಬರ್ 5ರಂದು ಎಸ್ಡಿಪಿಐ ಪ್ರತಿಭಟನೆಗೆ ಕರೆ ನೀಡಿತ್ತು. 'ಸ್ಟಾಪ್ ಬಿಲ್ಡಿಂಗ್ ರಾಮ್ ಮಂದಿರ್, ರಿಸ್ಟೋರ್ ಬಾಬ್ರಿ ಲ್ಯಾಂಡ್' ಎಂಬ ಪೋಸ್ಟರ್ಗಳನ್ನು ಎಸ್ಡಿಪಿಐ ರೆಡಿ ಮಾಡಿತ್ತು. ಆದರೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸರು ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಪೊಲೀಸರ ಮೇಲೆ ಎಸ್ಡಿಪಿಐ ಕೆಂಡ ಕಾರುತ್ತಿತ್ತು ಎಂದು ಆರೋಪಿಗಳ ಹೇಳಿಕೆಯಿಂದ ತಿಳಿದು ಬಂದಿದೆ.
2. ಬಕ್ರೀದ್ ಹಬ್ಬದ ದಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಸುತ್ತಮುತ್ತ ಒಂಟೆ, ದನ ತರಲು ಮತ್ತು ಕಡಿಯಲು ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲೂ ಪೊಲೀಸರ ಮೇಲೆ ಎಸ್ಡಿಪಿಐಗೆ ಆಕ್ರೋಶವಿತ್ತಂತೆ.
3. ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಸುತ್ತಮುತ್ತ ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಇದಕ್ಕೆ ಪೊಲೀಸರು ಕಡಿವಾಣ ಹಾಕಿದ್ದರು. ಇದು ಇಲ್ಲಿನ ಯುವಕರಿಗೆ ಸಿಟ್ಟು ತರಿಸಿತ್ತು ಎನ್ನಲಾಗಿದೆ.
4. ಮತ್ತೊಂದು ಪ್ರಮುಖ ಕಾರಣ, ಕೇಂದ್ರ ಸರ್ಕಾರದ ಸಿಎಎ-ಎನ್ಆರ್ಸಿ ಕಾಯ್ದೆಗಳು. ಇದು ಕೂಡ ಎಸ್ಡಿಪಿಐ ಮುಖಂಡರನ್ನು ಕೆರಳಿಸಿತ್ತು. ಈ ಎಲ್ಲಾ ವಿಚಾರಗಳನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಮೇಲಿನ ಎಲ್ಲಾ ವಿಚಾರಗಳನ್ನು ಆರೋಪಿಗಳು ಪೊಲೀಸರ ಮುಂದೆ ಹೇಳಿಕೊಂಡಿದ್ದರೂ ಪೊಲೀಸರು ಮಾತ್ರ ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಯಾಕೆಂದರೆ ಗಲಭೆಗೆ ಮುಖ್ಯ ಕಾರಣ ನವೀನ್ ಹಾಕಿದ ಅವಹೇಳನಕಾರಿ ಪೋಸ್ಟ್ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮತ್ತೊಂದಡೆ ಗಲಭೆಯ ಹಿಂದೆ ರಾಜಕೀಯ ಹುನ್ನಾರವಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.