ಬೆಂಗಳೂರು:ಇದ್ದ ಸೂರು ಹೋಯ್ತು, ಚಿನ್ನ ಬೆಳ್ಳಿಯು ಹೋಯ್ತು. ಮನೆ ಮೇಲೆ ದಾಳಿ ಮಾಡಿದ್ದಲ್ಲದೆ, ಇದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ವಿವಾದಿತ ಪೋಸ್ಟ್ ಹಾಕಿದ್ದ ನವೀನ್ ಮನೆಯ ಅಕ್ಕ ಪಕ್ಕದ ನಿವಾಸಿಗಳು, ಅಂಗಡಿ ಮಾಲೀಕರು ಪೊಲೀಸ್ ಠಾಣೆಗೆ ಬಂದು ದೂರು ನೀಡ್ತಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸುತ್ತಿದ್ದು, ಇದುವರೆಗೆ 45 ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿವೆ.
ಕಾವಲ್ ಬೈರಸಂದ್ರದ ರಾಭಿ ಎಂಬವರ ಮನೆಯಲ್ಲಿ ಕಳ್ಳತನ:ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಸಮೀಪದ ರಾಭಿ ಎಂಬವರ ಮನೆಯಿದ್ದು, ಗಲಭೆ ನಡೆದ ದಿನ ಹಲವಾರು ಮಂದಿ ಮಾರಕಾಸ್ತ್ರಗಳಿಂದ ಇವರ ಮನೆ ಮೇಲೆ ದಾಳಿ ಮಾಡಿ, 60 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ, 45 ಸಾವಿರ ರೂ. ನಗದು, ಮೊಬೈಲ್ ಫೋನ್ ಕದ್ದೊಯ್ದಿದ್ದಾರೆ ಹಾಗೂ ಮನೆಯ ಹೊರಗಡೆ ಇದ್ದ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಭಿ ದೂರು ದಾಖಲಿಸಿದ್ದಾರೆ.
ಪ್ರದೀಪ್ ಮನೆಯಲ್ಲಿ ಕಳ್ಳತನ:ಗಲಭೆ ನಡೆದ ದಿನದಂದುಪ್ರದೀಪ್ ಎಂಬವರ ಮನೆಗೆ ನುಗ್ಗಿದ್ದ 200 ಕ್ಕೂ ಹೆಚ್ಚು ದುಷ್ಕರ್ಮಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿ ಮಾಡಿದ್ದಾರೆ. ಬಳಿಕ ಮನೆಯ ಬೀರುವಿನಲ್ಲಿದ್ದ ವಸ್ತುಗಳನ್ನು ಹೊರಗೆಸೆದು ಬೀರುವಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಬೆಳ್ಳಿ ಆಭರಣ ದೋಚಿದ್ದಾರೆ. ಅಲ್ಲದೆ 4.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನಾಶ ಮಾಡಿದ್ದಾರೆ. ಪ್ರದೀಪ್ ಅವರಿಗೆ ಒಟ್ಟು 7.5 ಲಕ್ಷ ರೂ. ನಷ್ಟ ಸಂಭವಿಸಿದೆ. ಪ್ರದೀಪ್ ಪರಿಶಿಷ್ಟ ಜಾತಿಯವರಾಗಿದ್ದು, ಹೀಗಾಗಿ, ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೌಚಗೃಹದಲ್ಲಿ ಅಡಗಿ ಕುಳಿತಿದ್ದ ಸಂತೋಷ್ ಕುಟುಂಬ: ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಕೂಗಾಡ್ತ, ಸಂತೋಷ್ ಎಂಬವರ ಮನೆಗೆ ಕಿಡಿಗೇಡಿಗಳು ನುಗ್ಗಿದ್ದರು. ಇವರ ಆರ್ಭಟಕ್ಕೆ ಹೆದರಿ, ಮನೆಯ ಸದಸ್ಯರು ಶೌಚಗೃಹದಲ್ಲಿ ಅಡಗಿ ಕುಳಿತಿದ್ದರಂತೆ. ಈ ವೇಳೆ ದುಷ್ಕರ್ಮಿಗಳು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೂ ದಾಳಿ:ಕಾವಲ್ ಬೈರಸಂದ್ರದ ಬಳಿ ದಿಲೀಪ್ ಎಂಬವರು ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದರು. ಡಿ.ಜೆ. ಹಳ್ಳಿಯಿಂದ ಕಾವಲ್ ಬೈರಸಂದ್ರದ ಶಾಸಕರ ಮನೆಗೆ ಹೊರಟಿದ್ದ ಪುಂಡರ ಗುಂಪು ಬಾರ್ಗೆ ನುಗ್ಗಿ ಬಾಗಿಲು ಮುಚ್ಚುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ದುಷ್ಕರ್ಮಿಗಳ ದೌರ್ಜನ್ಯಕ್ಕೆ ಹೆದರಿ ದಿಲೀಪ್ ಬಾರ್ ಮುಚ್ಚಿದ್ದಾರೆ. ವಾಪಸ್ ಹೋದ ಆರೋಪಿಗಳು, ಮತ್ತೆ ರಾತ್ರಿ 9.30 ರ ಸುಮಾರಿಗೆ ಅಗಮಿಸಿ ಬಾರ್ ಮೇಲೆ ದಾಳಿ ಮಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಮದ್ಯದ ಬಾಟಲಿಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ, ಬಾರ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸುಮಾರು 60 ಲಕ್ಷ ರೂ. ಮೌಲ್ಯದ ವಸ್ತುಗಳು ಜಖಂಗೊಳಿಸಿದ್ದಾರೆ ಎಂದು ದೂರಲಾಗಿದೆ. ಸದ್ಯ ಡಿ.ಜೆ. ಹಳ್ಳಿ ಠಾಣೆಯಲ್ಲಿ ತೊಂದರೆಗೆ ಒಳಗಾದ ಒಬ್ಬೊಬ್ಬರೇ ಬಂದು ದೂರು ನೀಡ್ತಿದ್ದಾರೆ.