ಬೆಂಗಳೂರು: ಫೇಸ್ಬುಕ್ನಲ್ಲಿ ಆರೋಪಿ ನವೀನ್ ಮಾಡಿದ್ದ ಅವನಹೇಳನಕಾರಿ ಪೋಸ್ಟ್ಗೆ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಹೊತ್ತಿ ಉರಿದಿರುವುದು ಗೊತ್ತೇ ಇದೆ. ಆದ್ರೆ ಎಫ್ಬಿ ಪೋಸ್ಟ್ ಹಿಂದಿನ ಅಸಲಿ ಕಾರಣವೂ ಈಗ ಹೊರಬಿದ್ದಿದೆ.
ಎಫ್ಬಿಯಲ್ಲಿ ಪೋಸ್ಟ್ ಹಾಕಿದ ಸಂಬಂಧ ನವೀನ್ನನ್ನು ಬಂಧಿಸಿರುವ ಸಿಸಿಬಿ ಆತನನ್ನು ವಿಚಾರಣೆಗೊಳಪಡಿಸಿದೆ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟವಾಗಿದೆ.
ಗಲಭೆ ನಡೆದ ದಿನದಂದು ಎಂದಿನಂತೆ ನವೀನ್ ಕಾವಲ್ ಬೈರಸಂದ್ರದಲ್ಲಿ ಮನೆಯಲ್ಲಿದ್ದ. ಅಂದು ಸಂಜೆ ಪೈರೋಜ್ ಪಾಷಾ ಎಂಬಾತ ವಿಷಯವೊಂದರ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿರುವುದಕ್ಕೆ ಕೋಪಗೊಂಡ ನವೀನ್, ಪ್ರತಿಯಾಗಿ ತಮ್ಮ ಮೊಬೈಲ್ ಮೂಲಕ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದಾನೆ. ಪೋಸ್ಟ್ ಮಾಡಿ ಒಂದೆರೆಡು ಗಂಟೆಗಳ ಕಾಲ ಹೊರಹೋಗಿದ್ದಾನೆ. ಅಷ್ಟೊತ್ತಿಗಾಗಲೇ ವಿವಾದಾತ್ಮಕ ಪೋಸ್ಟ್ ಸ್ಕ್ರೀನ್ಶಾಟ್ನಿಂದ ಸೇವ್ ಮಾಡಿಕೊಂಡು ಇತರರಿಗೆ ಪೋಸ್ಟ್ ಆಗಿದೆ. ಅದಾಗಲೇ ನವೀನ್ಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಇದರಿಂದ ಆತಂಕಗೊಂಡು ಮನೆಗೆ ಬಂದು ನವೀನ್ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಬಳಿಕ ಮೊಬೈಲ್ ಹ್ಯಾಕ್ ಆಗಿದೆ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮನೆ ಹತ್ತಿರ ಅಪರಿಚಿತರು ಬರುವುದನ್ನು ಕಂಡ ನವೀನ್ ಸ್ನೇಹಿತರ ಬಳಿ ಹೇಳಿಕೊಂಡು ಪೇಚಾಡಿದ್ದಾನೆ. ಈ ವೇಳೆ ಮೊಬೈಲ್ ಕಳೆದಿರುವ ಬಗ್ಗೆ ದೂರು ನೀಡುವಂತೆ ಸ್ನೇಹಿತರು ಸಲಹೆ ನೀಡಿದ್ದರಂತೆ.