ಬೆಂಗಳೂರು: ಕೆಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡು ಕ್ಯಾಬ್ ಮುಳುಗಿ ಯುವತಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅವಘಡಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಸ್ಥೆಯ ಪೊಲೀಸ್ ವಿಭಾಗಕ್ಕೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.
ಅವಘಡದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇ 21ರಂದು ನಗರದಲ್ಲಿ ಸುರಿದ ಭಾರಿ ಮಳೆಗೆ ಕೆಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ಕ್ಯಾಬ್ ಮುಳುಗಿದ ಪರಿಣಾಮ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು.
ಇದನ್ನೂ ಓದಿ:ರಾಜಧಾನಿಯಲ್ಲಿ ಸುರಿದಿದ್ದು ಕೇವಲ ಒಂದೇ ಗಂಟೆ ಮಳೆಗೆ ಟೆಕ್ಕಿ ಬಲಿ; ಅವಾಂತರಗಳ ಮಾಹಿತಿ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಜೂ.5ರೊಳಗೆ ಪ್ರತಿಕ್ರಿಯೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ನೋಟಿಸ್ ಜಾರಿ ಮಾಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು, ಉತ್ತರ ವಲಯ ಆಯುಕ್ತರು, ಶಿವಾಜಿನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಸಂಪಂಗಿ ರಾಮನಗರ ವಾರ್ಡ್‌ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್, ಬಿಬಿಎಂಪಿ ಮಳೆ ನೀರು ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಇಂಜಿನಿಯರ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳೆಂದು ಹೆಸರಿಸಲಾಗಿದೆ.
ಕರ್ತವ್ಯಲೋಪ?: ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು ಬಿಬಿಎಂಪಿಯ ಜವಾಬ್ದಾರಿ. ಈ ಪ್ರಕರಣದಲ್ಲಿ ಮಳೆ ನೀರು ಕಾಲುವೆ ವಿಭಾಗದ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಲೋಕಾಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಘಟನೆಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಐಜಿಪಿಗೆ ನಿರ್ದೇಶನ ನೀಡಲಾಗಿದ್ದು. ಜೂ.15ಕ್ಕೆ ವಿಚಾರಣೆ ನಿಗದಿಯಾಗಿದೆ.
ಇದನ್ನೂ ಓದಿ:ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಭಾನುರೇಖಾ ಕುಟುಂಬಸ್ಥರಿಂದ ಬಿಬಿಎಂಪಿ ವಿರುದ್ಧ FIR ದಾಖಲು
ಘಟನೆಯ ಹಿನ್ನೆಲೆ:ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ಮಳೆ ನೀರಲ್ಲಿ ಕಾರು ಸಿಲುಕಿ ಭಾನುರೇಖಾ ರೆಡ್ಡಿ (23) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ್ದರು. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತೆಲಪ್ರೋಲು ಮೂಲದವರಾದ ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮೇ 21ರಂದು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದರು. ಕೆ.ಆರ್.ಸರ್ಕಲ್ ತಲುಪುವಷ್ಟರಲ್ಲಿ ಮಳೆ ಜೋರಾಗಿತ್ತು. ಮುಂದೆ ಸಾಗುತ್ತಿದ್ದಾಗ ಅಂಡರ್ ಪಾಸ್ಗೆ ನೀರು ತುಂಬಿಕೊಂಡಿತ್ತು. ನೀರು ಹೊರಹೋಗಲು ದಾರಿ ಇಲ್ಲದೇ ಕಾರು ಹೊರಡುವ ವೇಳೆಗೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಆರು ಮಂದಿ ಸಿಕ್ಕಿಬಿದ್ದಿರುವುದನ್ನು ಕಂಡು ಪೊಲೀಸರು ಮತ್ತು ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅವರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲಿ ಭಾನುರೇಖಾ ಮೃತಪಟ್ಟಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮಳೆ ಅನಾಹುತ: ಕೆ.ಆರ್.ವೃತ್ತ ಅಂಡರ್‌ಪಾಸ್ ಪರಿಶೀಲಿಸಿದ ಡಿಸಿಎಂ ಡಿಕೆಶಿ