ಬೆಂಗಳೂರು: ಸತತ ಮಳೆಯಿಂದ ತತ್ತರಿಸಿರುವ ರಾಜ್ಯ ರಾಜಧಾನಿ ಜನತೆಗೆ ಇಂದೂ ಮಳೆರಾಯನ ಕಾಟ ಮುಂದುವರಿದಿದೆ. ಮಳೆ ಅನಾಹುತದ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ನಂತೆ ಸಿಎಂ ಬಸವರಾಜ ಬೊಮ್ಮಾಯಿ ನಗರ ಸಂಚಾರ ನಡೆಸಲಿದ್ದಾರೆ.
ಬೆಂಗಳೂರಲ್ಲಿ ಮುಂದುವರಿದ ಮಳೆ: ಸಂಜೆಯವರೆಗೂ ಸುಡು ಬಿಸಿಲಿನಿಂದ ಕೂಡಿದ್ದ ಬೆಂಗಳೂರು ವಾತಾವರಣ ಸಂಜೆಯಾಗುತ್ತಿದ್ದಂತೆ ಸಂಪೂರ್ಣ ಬದಲಾಗಿದ್ದು, ವ್ಯಾಪಕ ಮಳೆಯಾಯಿತು. ಸಂಜೆ 7 ಗಂಟೆಯಿಂದ 8.30 ರವರೆಗೆ ಮಳೆ ಸುರಿಯಿತು. ಮೆಜೆಸ್ಟಿಕ್, ಮಲ್ಲೇಶ್ವರಂ, ಶಾಂತಿನಗರ, ಶಿವಾಜಿನಗರ, ಜೆಪಿ ನಗರ, ಯಶವಂತಪುರ, ಸರ್ಜಾಪುರ ರಸ್ತೆ, ಬೆಳ್ಳಂದೂರು ಸೇರಿದಂತೆ ಹಲವು ಕಡೆ ವ್ಯಾಪಕ ಮಳೆಯಾಯಿತು. ವರುಣನ ಆರ್ಭಟಕ್ಕೆ ರಸ್ತೆಗಳೆಲ್ಲಾ ನದಿಯಂತಾಗಿದ್ದು, ವಾಹನ ಸವಾರರು ಪರದಾಡಬೇಕಾಯಿತು.