ಬೆಂಗಳೂರು: ಸ್ವಾತಂತ್ರ್ಯ ದಿನ ಸಮೀಪಿಸುತ್ತಿದ್ದಂತೆ ನಗರದ ಗಲ್ಲಿ ಗಲ್ಲಿಗಳಲ್ಲಿ ತ್ರಿವರ್ಣ ಧ್ವಜಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಈ ಬಾರಿ ಪ್ಲಾಸ್ಟಿಕ್ ಧ್ವಜಗಳ ಬದಲಾಗಿ ಖಾದಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಹೀಗಾಗಿ ನಗರದ ಅಂಗಡಿಗಳಲ್ಲಿ, ರಸ್ತೆ ಸಿಗ್ನಲ್ಗಳಲ್ಲಿ ತ್ರಿವರ್ಣ ಧ್ವಜದ ಮಾರಾಟ ಜೋರಾಗಿದ್ದು, ಈ ಬಾರಿ ಪ್ಲಾಸ್ಟಿಕ್ ಧ್ವಜಕ್ಕೆ ಸಂಪೂರ್ಣ ಮುಕ್ತಿ ನೀಡಿ, ಖಾದಿ ಧ್ವಜವನ್ನು ಬಳಕೆ ಮಾಡಲಾಗುತ್ತಿದೆ.
ನಗರದ ಕಾರ್ಪೋರೇಷನ್ ಸರ್ಕಲ್ ಮತ್ತು ಕಬ್ಬನ್‌ಪಾರ್ಕ್ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜ ವ್ಯಾಪಾರ ಗರಿಗೆದರಿದೆ. ಖಾದಿ ಧ್ವಜ, ಧ್ವಜದ ಬ್ಯಾಡ್ಜ್, ಹ್ಯಾಂಡ್ ಬ್ಯಾಂಡ್ ಸೇರಿದಂತೆ ಟೀ ಶರ್ಟ್, ಟೋಪಿಗಳನ್ನು ಮಾರಾಟ ಮಾಡಲಾಗುತ್ತಿದೆ. ತ್ರಿವರ್ಣ ಧ್ವಜಗಳ ಮಾರಾಟಕ್ಕಾಗಿ ದಾವಣಗೆರೆಯಿಂದ ಒಂದು ತಂಡ ಬೆಂಗಳೂರಿಗೆ ಆಗಮಿಸಿದ್ದು, ವ್ಯಾಪಾರದಲ್ಲಿ ತೊಡಗಿದೆ.
ಧ್ವಜ ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿ ಪ್ರತೀ ಬಾರಿ ಸ್ವಾತಂತ್ರ್ಯ ದಿನಕ್ಕೆ ಎರಡು- ಮೂರು ದಿನ ಇರುವಾಗಲೇ ಆಗಮಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಧ್ವಜಗಳನ್ನು ಖರೀದಿಸಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತೇವೆ. 5 ರೂಪಾಯಿಂದ ಶುರುವಾಗಿ 200 ರೂಪಾಯಿವರೆಗೆ ನಾನಾ ಬೆಲೆಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಧ್ವಜಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮಳೆಯಾದ್ದರಿಂದ ವ್ಯಾಪಾರಕ್ಕೆ ಸ್ವಲ್ಪ ತೊಡಕಾಗುತ್ತಿದೆ, ಎನ್ನುತ್ತಾರೆ ದಾವಣಗೆರೆಯಿಂದ ಆಗಮಿಸಿದ ಧ್ವಜ ವ್ಯಾಪಾರಿ ನಾಗರಾಜ್.