ಕರ್ನಾಟಕ

karnataka

ETV Bharat / state

ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ಗುಂಡಿಗಳ ವ್ಯಾಲಿಯಾಗಿದೆ: ಸರ್ಕಾರಕ್ಕೆ ಹೆಚ್‌ಡಿಕೆ ಟ್ವೀಟ್‌ ಬಾಣ - ಹೆಚ್ ಡಿ ಕುಮಾರಸ್ವಾಮಿ ಕಿಡಿ

ರಾಜ್ಯ ಬಿಜೆಪಿ ಸರ್ಕಾರಕ್ಕೆ ರಸ್ತೆ ಗುಂಡಿಗಳು ಎಂದರೆ ಬಲು ಇಷ್ಟ. ಗುಂಡಿಗಳು ಬಿದ್ದಷ್ಟೂ ಕಿಸೆಗೆ ಹರಿದು ಬರಲಿದೆ ದುಡ್ಡು. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ, ಸಂಕೋಚ ಎನ್ನುವುದಿಲ್ಲ- ಹೆಚ್‌ ಡಿ ಕುಮಾರಸ್ವಾಮಿ

HD Kumaraswamy
ಹೆಚ್‌ಡಿ ಕುಮಾರಸ್ವಾಮಿ

By

Published : Oct 19, 2022, 11:10 AM IST

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಉದ್ಯಾನ ನಗರ, ಸಿಲಿಕಾನ್ ವ್ಯಾಲಿ ಎಂದೆಲ್ಲ ಹೆಸರುಗಳಿದ್ದವು. ಆದರೆ, ಈಗ ಅವು ಗುಂಡಿಗಳೂರು, ಅಧ್ವಾನ ನಗರ, ಗುಂಡಿಗಳ ವ್ಯಾಲಿ ಎಂದಾಗಿದೆ. ಕಾಮಗಾರಿಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯೇ ಇಂತಹ ಕುಖ್ಯಾತಿಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ?. ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ ಎಂದು ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ರಸ್ತೆ ಗುಂಡಿಗಳು ಎಂದರೆ ಬಲು ಇಷ್ಟ. ಗುಂಡಿಗಳು ಬಿದ್ದಷ್ಟೂ ಕಿಸೆಗೆ ಹರಿದು ಬರಲಿದೆ ದುಡ್ಡು. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ, ಸಂಕೋಚ ಎನ್ನವುದಿಲ್ಲ. ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ಕೊಟ್ಟರೂ ಅಧಿಕಾರಿಗಳು ಭಂಡತನ ಬಿಡುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿರುವುದು ಒಂದೆಡೆ, ಇನ್ನೊಂದೆಡೆ ಸರ್ಕಾರ ಜಾಗತಿಕ ಹೂಡಿಕೆದಾರರ ಸಮಾವೇಶ, ಜಾಗತಿಕ ತಂತ್ರಜ್ಞಾನ ಶೃಂಗ ನಡೆಸುತ್ತಿದೆ. 'ರಸ್ತೆ ಗುಂಡಿಗಳ ಶೃಂಗ' (Potholes Summit) ವನ್ನೂ ನಡೆಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಹೆಚ್​​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರ್ಕಾರವೇ ನೇರ ಕಾರಣ. ಮುಗ್ಧ ಜನರ ಸಾವು ನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು. ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಅವರು ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸೂಕ್ತ ಪರಿಹಾರ ಬಿಡುಗಡೆಗೆ ಆಗ್ರಹ:ಮೃತ ಮಹಿಳೆ ಶ್ರೀಮತಿ ಉಮಾದೇವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ರಾಜ್ಯ ಸರ್ಕಾರ ಅವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಜನರ ಪ್ರಾಣ ಬಲಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು... ವರ್ಷದಲ್ಲೇ 10 ಜನ ಸಾವು

ABOUT THE AUTHOR

...view details