ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ವೊಂದನ್ನು ಮಾಡಿದೆ. ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಹಾಗೂ ಕ್ರಿಮಿನಲ್ಗಳನ್ನು ಬಂಧಿಸಲು ಸಹಾಯವಾಗುವ ಹೊಸ ಆ್ಯಪ್ ವೊಂದನ್ನು ಕೇಂದ್ರ ಗೃಹ ಇಲಾಖೆ ಪರಿಚಯಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಜನರು ರಾತ್ರಿ ಹಗಲೆನ್ನದೇ ಕೆಲಸ ಮಾಡುತ್ತಾರೆ. ಅದರಲ್ಲೂ ಐಟಿ - ಬಿಟಿ ಹಾಗೂ ಎಂಎನ್‌ಸಿ ಕಂಪನಿಗಳಲ್ಲಿ ಕೆಲಸ ಮಾಡುವವರು ತಡರಾತ್ರಿಯವರೆಗೂ ನಗರದಲ್ಲಿ ಓಡಾಟ ನಡೆಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದುಷ್ಕರ್ಮಿಗಳು, ತಡರಾತ್ರಿ ಒಂಟಿಯಾಗಿ ಓಡಾಡುವರರನ್ನು ಅಡ್ಡಹಾಕಿ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಅಷ್ಟೇ ಅಲ್ಲದೆ ನಗರದಲ್ಲಿ ಇತ್ತೀಚೆಗೆ ಕೊಲೆ, ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿಯೇ ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಕೇಂದ್ರ ಗೃಹ ಇಲಾಖೆ ಮೊಬೈಲ್ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಅಂಡ್ ಸಿಸ್ಟಂ (ಎಮ್‌ಸಿಸಿಟಿಎನ್ಎಸ್) ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಮೊಬೈಲ್ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಅಂಡ್ ಸಿಸ್ಟಂ (ಎಮ್‌ಸಿಸಿಟಿಎನ್ಎಸ್) ಆ್ಯಪ್: ಈ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬೆಂಗಳೂರು ಪೊಲೀಸರಿಗೆ ಪರಿಚಯಿಸಲಾಗಿದ್ದು, ಪೊಲೀಸರು ಈಗಾಗಲೇ ಈ ಆ್ಯಪ್ನ ಬಳಕೆ ಮಾಡುತ್ತಿದ್ದಾರೆ.
ಬೆರಳಚ್ಚು ಸ್ಕ್ಯಾನರ್ ಹಿಡಿದು ಪೊಲೀಸರ ಕಾರ್ಯಾಚರಣೆ: ಈ ಹೊಸ ಆ್ಯಪ್ ಅನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡು, ಈ ಮೂಲಕ ಕ್ರಿಮಿನಲ್ಸ್ಗಳ ಎಲ್ಲ ಮಾಹಿತಿಯನ್ನು ತೆಗೆಯ ಬಹುದಾಗಿದೆ. ಇದರಿಂದಾಗಿ ತಲೆಮರೆಸಿಕೊಂಡು ಸುತ್ತಾಡುವ ಆರೋಪಿಗಳು ಸುಲಭವಾಗಿ ಪೊಲೀಸರ ಬಲೆಗೆ ಬೀಳುತ್ತಾರೆ. ನಗರದ ಪ್ರತಿ ಸ್ಟೇಷನ್‌ಗೆ ತಲಾ ಐದರಂತೆ ಇಂತಹ ಸ್ಕ್ಯಾನರ್ ಹಾಗೂ ಮೊಬೈಲ್ಗಳಿಗೆ ಆ್ಯಪ್ಗಳನ್ನು ನೀಡಲಾಗಿದೆ.
ರಾತ್ರಿ 11 ಗಂಟೆ ನಂತರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಜನರ ಬೆರಳಚ್ಚನ್ನು ಸ್ಕ್ಯಾನ್ ಮಾಡಲಾಗುತ್ತದೆ. ಈ ಮೂಲಕ ಸೆರೆಯಾಗುವ ಆರೋಪಿಗಳನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಇದರಿಂದ ಯಾವೊಬ್ಬ ದುಷ್ಕರ್ಮಿಯು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಗರ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಹೇಳುತ್ತಾರೆ.
ಇದನ್ನೂ ಓದಿ :ನಮಗೆ ನೋಟಿಸ್ ಕೊಡದೇ ತೆರವು ಮಾಡಲಾಗುತ್ತಿದೆ: ಶಾಸಕ ಹ್ಯಾರೀಸ್ ಆರೋಪ