ಬೆಂಗಳೂರು: ದೆಹಲಿ ಗಡಿಯಲ್ಲಿ ಕೃಷಿ ತಿದ್ದುಪಡಿ ಕಾನೂನುಗಳನ್ನು ರದ್ದು ಪಡಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಇಂದಿಗೆ (ಜೂನ್ 26) ಏಳು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆ ದೇಶಾದ್ಯಂತ 'ಕೃಷಿ ಉಳಿಸಿ- ಪ್ರಜಾಪ್ರಭುತ್ವವನ್ನು ರಕ್ಷಿಸಿ' ಎಂಬ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೇಶದ ಮೂಲೆ- ಮೂಲೆಯಿಂದ ರೈತ ಸಂಘಟನೆಗಳು ಪತ್ರ ಬರೆಯುತ್ತಿವೆ.
ನಗರದಲ್ಲಿಯೂ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ನಗರದ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕೊಡುವ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ರಾಜ್ಯಪಾಲರ ಭೇಟಿಗೆ ಅವಕಾಶ ಕೊಡದೆ, ಮೌರ್ಯ ಸರ್ಕಲ್ನಲ್ಲೇ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬಡಗಲಪುರ ನಾಗೇಂದ್ರ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡವನ್ನು ಮೌರ್ಯ ಸರ್ಕಲ್ನಲ್ಲಿ ಪೊಲೀಸರು ವಶಕ್ಕೆ ಪಡೆದರು.
ಇನ್ನೊಂದೆಡೆ ರಾಜಭವನಕ್ಕೆ ಹೊರಟಿದ್ದ ಕುರುಬೂರು ಶಾಂತಕುಮಾರ್ ನೇತೃತ್ವದ ಪ್ರತಿಭಟನಾಕಾರರನ್ನು ಜ್ಞಾನಜ್ಯೋತಿ ಆಡಿಟೋರಿಯಂ ಬಳಿ ಇರುವ ಕಾವೇರಿ ಅತಿಥಿ ಗೃಹದಲ್ಲಿಯೇ ವಶಕ್ಕೆ ಪಡೆದು ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಗಿದೆ.
ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಸ್ವಾತಂತ್ರ್ಯ ಹರಣವಾಗಿದೆ. ರೈತವಿರೋಧಿ ಕಾನೂನನ್ನು ಜಾರಿಗೆ ತಂದಿರುವ ಯಡಿಯೂರಪ್ಪ ಸರ್ಕಾರ ಕೂಡಾ ರೈತ ವಿರೋಧಿಯಾಗಿದೆ. ಇದನ್ನು ವಿರೋಧಿಸಿ ರಾಜ್ಯಪಾಲರ ಬಳಿ ಮನವಿ ಮಾಡಲು ಹೋಗುತ್ತಿದ್ದೆವು.
ಆದರೆ, ಸರ್ಕಾರ ಅದಕ್ಕೆ ಅವಕಾಶ ನೀಡದೇ ನಮ್ಮ ಪ್ರತಿಭಟನಾ ಸ್ವಾತಂತ್ರ್ಯ ಹರಣ ಮಾಡಿದೆ. ರೈತವಿರೋಧಿ ಕಾನೂನುಗಳನ್ನು ಬಲತ್ಕಾರವಾಗಿ ನಮ್ಮ ಮೇಲೆ ಹೇರುತ್ತಿದ್ದಾರೆ.
ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಇಂದು ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ. ಎಮರ್ಜೆನ್ಸಿ ವಿರೋಧಿಸಿದವರೇ ಇಂದು ಆ ಪರಿಸ್ಥಿತಿ ಮತ್ತೆ ತಂದಿದ್ದಾರೆ. ಇಡೀ ದೇಶದ ವ್ಯವಸ್ಥೆ ಖಾಸಗೀಕರಣ ಮಾಡಲು ಹೊರಟಿರುವುದರಿಂದ ಇವು ಜನವಿರೋಧಿ, ದೇಶವಿರೋಧಿ ಕಾನೂನುಗಳು. ನ್ಯಾಯ ಕೇಳಲು ಬಂದ ನಮ್ಮನ್ನು ಜೈಲಿಗೆ ಹಾಕ್ತೇವೆ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.