ಬೆಂಗಳೂರು:ಕೊರೊನಾ ಸೋಂಕು ವ್ಯಾಪಕವಾಗಿ ಹಬ್ತಿರುವ ಕಾರಣ ಸದ್ಯ ಬೆಂಗಳೂರು ಪೊಲೀಸರು ಮಾಸ್ಕ್ ಹಾಕದವರಿಗಾಗಿ ಅಭಿಯಾನ ಶುರು ಮಾಡಿದ್ದಾರೆ.
ಮಾಸ್ಕ್ ಧರಿಸಿ ಜಾಗೃತಿ ಕಾರ್ಯಕ್ರಮ 'ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಲು ಮಾಸ್ಕ್ ಧರಿಸಿ' ಎಂದು ನಗರದ ಟೌನ್ಹಾಲ್, ಕೆ.ಆರ್ ಮಾರ್ಕೆಟ್, ರಸೆಲ್ ಮಾರ್ಕೆಟ್ ಬಳಿ ಅಭಿಯಾನ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಮಾಸ್ಕ್ ಹಾಗು ಸ್ಯಾನಿಟೈಸರ್ ಕೂಡ ವಿತರಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ, ಮುರುಗನ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಭಾಗಿಯಾಗಿದ್ರು. ಜನನಿಬಿಡ ಪ್ರದೇಶದಲ್ಲಿ ಜಾಗೃತಿಯೊಂದಿಗೆ, ಮಾಸ್ಕ್ ವಿತರಿಸಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಕಾಯ್ದುಕೊಂಡು ತೆರಳುವಂತೆ ಸಾರ್ವಜನಿಕರಿಗೆ ಸೂಚಿಸಿದ್ರು.
ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾತನಾಡಿ, ಬೆಂಗಳೂರಿನಲ್ಲಿ ಜನ ಹೆಚ್ಚು ಸೇರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈಗಾಗಲೇ ಸರ್ಕಾರದಿಂದ ದಂಡ ವಿಧಿಸಲು ಸೂಚನೆ ಕೂಡ ಸಿಕ್ಕಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಇನ್ನು ಮುಂದೆ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಒಂದು ಗಂಟೆ ಮಾಸ್ಕ್ ಬಗ್ಗೆ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ನಮ್ಮ ಉದ್ದೇಶ ದಂಡ ಹಾಕುವುದಲ್ಲ, ಜನರನ್ನು ಜಾಗೃತರಾಗಿಸಿ ಕೊರೊನಾ ಮುಕ್ತ ಮಾಡುವುದು ಎಂದಿದ್ದಾರೆ.