ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೊಳಗಾದ ಉದ್ಯಮಿಯನ್ನು ನಗರದ ಪೊಲೀಸರು ರಕ್ಷಿಸಿದ್ದಾರೆ. ಅಭಿಲಾಷ್ ದಾಮೋದರನ್ ಎಂಬವರು ಕಿಡ್ನಾಪ್ ಆಗಿದ್ದರು. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಮಲ ಎಂಬಾಕೆಯೊಂದಿಗೆ ಅಭಿಲಾಷ್ ಉದ್ಯಮ ನಡೆಸುತ್ತಿದ್ದರು. ಕೋಮಲ ಹಾಗೂ ಅಭಿಲಾಷ್ ನಡುವೆ ನಡೆದ ಒಂದೂವರೆ ಕೋಟಿ ರೂಪಾಯಿ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಿತ್ತು. ಅಕ್ಟೋಬರ್ 20ರಂದು ರಾತ್ರಿ ಸಂಪಿಗೆಹಳ್ಳಿಯ ಆತನ ಮನೆಯ ರಸ್ತೆಯ ಬಳಿಯಿದ್ದ ಅಭಿಲಾಷ್ ಅವರನ್ನು ಕೋಮಲ ಅವರ ಕಡೆಯ ತಂಡದ ಸಂದೀಪ್, ಗೋಪಾಲ್, ಭಾಸ್ಕರ್ ಸೇರಿದಂತೆ ಎಂಟು ಜನರ ತಂಡ ಅಪಹರಿಸಿ, ರಾಮಮೂರ್ತಿ ನಗರದ ಗೋಡೌನ್ನಲ್ಲಿ ಬಚ್ಚಿಟ್ಟಿತ್ತು.
₹50 ಲಕ್ಷ ಹಣ ನೀಡುವಂತೆ ಬೇಡಿಕೆ: ಆರೋಪಿಗಳು ಉದ್ಯಮಿಯ ಕುತ್ತಿಗೆಗೆ ಚಾಕು ಇಟ್ಟು, ಗನ್ ಪಾಯಿಂಟ್‌ನಲ್ಲಿ ಬೆದರಿಸಿ 50 ಲಕ್ಷ ಹಣ ನೀಡುವಂತೆ ಧಮ್ಕಿ ಹಾಕಿದ್ದರು. ಅಭಿಲಾಷ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಪತ್ನಿ, ತಂದೆಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಹಣ ನೀಡಲು ನಿರಾಕರಿಸಿದ್ದಕ್ಕೆ ವಿಡಿಯೋ ಕರೆ ಮಾಡಿ ಪುನಃ ಹಲ್ಲೆ ಮಾಡಿದ್ದರು.
ಆದರೆ ಆರೋಪಿಗಳು ಊಟಕ್ಕೆ ತೆರಳಿದ್ದಾಗ ಅವರಿದ್ದ ಫೋನ್ ಬಳಸಿ ಪೊಲೀಸರಿಗೆ ಕರೆ ಮಾಡಿದ್ದ ಅಭಿಲಾಷ್, ತಾನು ಅಪಹರಿಸಲ್ಪಟ್ಟ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದ ಪೊಲೀಸರು ಅಕ್ಟೋಬರ್ 21ರಂದು ಬೆಳಿಗ್ಗೆ ಅಭಿಲಾಷ್ನನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಕೋಮಲ ಮತ್ತಿತರ ಕೆಲ ಆರೋಪಿಗಳು ಪರಾರಿಯಾಗಿದ್ದಾರೆ.
ಅಭಿಲಾಷ್ ನೀಡಿರುವ ದೂರಿನ ಮೇರೆಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯನ್ನು ಸಂಪಿಗೆಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
107 ಗ್ರಾಂ ಚಿನ್ನ ವಶ:ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 107 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದರು. ಅ. 21ರಂದು ದುಬೈನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ದುಬೈನಿಂದ ಬಂದಿಳಿದ ಪ್ರಯಾಣಿಕನನ್ನು ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಡೆದು ವಿಚಾರಣೆ ಮಾಡಿದ್ದಾರೆ. ಪ್ರಯಾಣಿಕನ ಬಳಿಯಿದ್ದ ಡಬಲ್ ಲೇಯರ್ ಬಿಸ್ಕತ್ ಮತ್ತು ಚಾಕೊಲೆಟ್ ಹೊಂದಿರುವ ಎರಡು ರಟ್ಟಿನ ಪೆಟ್ಟಿಗೆಗಳ ಪದರಗಳಲ್ಲಿ ಚಿನ್ನ ಮುಚ್ಚಿಡಲಾಗಿತ್ತು. ಪರಿಶೀಲನೆಯಲ್ಲಿ ಒಟ್ಟು 107 ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ. 6,47,350 ಎಂದು ಅಂದಾಜಿಸಲಾಗಿದೆ. ಪ್ರಯಾಣಿಕ ಮತ್ತು ಚಿನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಇದನ್ನೂಓದಿ:ಕೋಲಾರ: ಸ್ಥಳೀಯ ಪ್ರಭಾವಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ; ಮೂರೇ ದಿನದಲ್ಲಿ ಇಬ್ಬರು ಕೊಲೆ