ಬೆಂಗಳೂರು :ಮಾದಕ ವಸ್ತು ಜಾಲ ಪ್ರಕರಣದಲ್ಲಿ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಜೊತೆಗೆ ನಿರಂತರ ಸಂಪರ್ಕದ ಮಾಹಿತಿ ಮೇರೆಗೆ ನಗರ ಪೂರ್ವ ವಿಭಾಗದ ಪೊಲೀಸರು ಮೂವರ ಮನೆಗಳ ಮೇಲೆ ದಾಳಿ ಮಾಡಿ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಚುರುಕುಗೊಳಿಸಿದ್ದಾರೆ.
ಕಾಸ್ಮೆಟಿಕ್ ವ್ಯವಹಾರ ನಡೆಸುತ್ತಿದ್ದ ಮಾಡೆಲ್, ನಟಿ ಸೋನಿಯಾ ಅಗರವಾಲ್, ಡಿಜೆ ವಚನ್ ಸಿದ್ದಪ್ಪ, ಉದ್ಯಮಿ ಭರತ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಮತ್ತೋರ್ವನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಿಯಾ ಅಗರ್ವಾಲ್ ರಾಜಾಜಿನಗರದ ನಿವಾಸದ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ದಾಳಿ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ. ದಾಳಿ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಸೋನಿಯಾ ಶೋಧಕ್ಕಾಗಿ ಆಕೆ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ನಲ್ಲಿರುವುದನ್ನು ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲಿ ಬಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಇಡೀ ಹೋಟೆಲ್ ಪೂರ್ತಿ ಓಡಾಡಿದ್ದಾಳೆ. ಹೋಟೆಲ್ ಮೇಲಿಂದ ಕೆಳಗೆ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೊನೆಗೆ ಪುರುಷರ ವಾಶ್ ರೂಂನಲ್ಲಿ ಅವಿತು ಕುಳಿತಿದ್ದ ಸೋನಿಯಾಳನ್ನು ಪೊಲೀಸರು ಹುಡುಕಿ ಕರೆತಂದಿದ್ದಾರೆ ಎನ್ನಲಾಗಿದೆ.
ಮಾಡೆಲ್ ಮನೆ ಮೇಲೆ ದಾಳಿ :ಬಳಿಕ ಡಿಜೆಹಳ್ಳಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಡ್ರಗ್ಸ್ ನಂಟಿನ ಕುರಿತ ಪ್ರಶ್ನೆಗೆ ಮಾಡೆಲ್ ತಬ್ಬಿಬ್ಬಾಗಿದ್ದಾರೆ. ಥಾಮಸ್ ಜೊತೆಗೆ ನಂಟು ಹೊಂದಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಆನ್ಲೈನ್ ಪ್ಲಾಟ್ ಫಾರಂನಲ್ಲಿ ಬಂಬಲ್ ಬೆರಿ ಅನ್ನೋ ಕಾಸ್ಮೆಟಿಕ್ ಸೇಲ್ ಕೂಡ ಈಕೆ ಮಾಡುತ್ತಿದ್ದಳು. ಹೈಫೈ ಪಾರ್ಟಿಗಳಲ್ಲಿ ಅದೇ ನೆಪದಲ್ಲಿ ಡ್ರಗ್ಸ್ ಕೂಡ ನೀಡುತ್ತಿದ್ದಳು ಎಂಬುದು ಕೂಡ ಗೊತ್ತಾಗಿದೆ. ಜೊತೆಗೆ ಈಕೆಯ ಸಂಪರ್ಕದಲ್ಲಿ ರಾಜಕಾರಣಿ ಮಕ್ಕಳು, ಸ್ಟಾರ್ ನಟ-ನಟಿಯರ ಮಕ್ಕಳು ಇದ್ದಾರೆ ಎನ್ನಲಾಗುತ್ತಿದೆ. ಮಾಡೆಲ್ ಸೋನಿಯಾಳನ್ನು ಬಂಧಿಸುವ ಸಾಧ್ಯತೆಯಿದೆ.
ಡಿಜೆ ವಚನ್ ವಶಕ್ಕೆ :ಬೆನ್ಸನ್ ಟೌನ್ನಲ್ಲಿರುವ ಡಿಜೆ ವಚನ್ ಚಿನ್ನಪ್ಪ ಮನೆ ಜಾಲಾಡಿದ ಪೂರ್ವ ವಿಭಾಗ ಪೊಲೀಸರಿಗೆ ಗಾಂಜಾ ಕೂಡ ಸಿಕ್ಕಿದೆ. ಅಲ್ಲದೇ ಹಲವು ಸ್ಟಾರ್ ನಟರು ಭಾಗಿಯಾಗುತ್ತಿದ್ದ ಪಾರ್ಟಿಗೆ ಈತ ಡಿಜೆಯಾಗಿರುತ್ತಿದ್ದ. ಅಲ್ಲಿ ಬರುವ ಹೈಫೈ ಮಂದಿಗೆ ಕೋಡ್ ವರ್ಡ್ ಮೂಲಕ ಡ್ರಗ್ಸ್ ನೀಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಈತನನ್ನ ಕೆಜಿಹಳ್ಳಿ ಠಾಣೆಯಲ್ಲಿಟ್ಟು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಈತನ ಕಾಂಟಾಕ್ಟ್ ಲಿಸ್ಟ್ನಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿದ್ದಾರೆ ಎಂತಲೂ ಹೇಳಲಾಗುತ್ತಿದೆ.