ಬೆಂಗಳೂರು :ನಡುರಸ್ತೆಯಲ್ಲಿ ಹಾಗೂ ನೋ ಪಾರ್ಕಿಂಗ್ ವಾಹನಗಳನ್ನು ನಿಲ್ಲಿಸುವುದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ರೀತಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಮೂಲಕ ಠಾಣೆಗೆ ತರಲಾಗುತ್ತದೆ. ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ಆವಾಜ್ ಹಾಕುವುದನ್ನು ಸಹಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖಡಕ್ ಎಚ್ಚರಿಕೆ ನೀಡಿದರು.
ಕುಂದು-ಕೊರತೆಗಳು ಹಾಗೂ ಪೊಲೀಸ್ ಇಲಾಖೆಯ ಕುರಿತು ಅಭಿಪ್ರಾಯ ಮತ್ತು ಸಮಸ್ಯೆಗಳನ್ನ ಆಲಿಸಲು ಫೇಸ್‍ಬುಕ್ ನಲ್ಲಿ ಸಾರ್ವಜನಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ಪ್ರಾಣ ರಕ್ಷಣೆ ದೃಷ್ಟಿಯಿಂದ ಸಂಚಾರ ನಿಯಮ ಮಾಡಲಾಗಿದೆ. ಅದನ್ನ ಪ್ರತಿಯೊಬ್ಬರೂ ಪಾಲಿಸಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಹೇಳಿದರು.
ಸಂಚಾರ ನಿಯಮ ಉಲ್ಲಂಘಿಸುವವರು ತಮ್ಮ ಪ್ರಾಣಕ್ಕೆ ತೊಂದರೆ ಮಾಡಿಕೊಳ್ಳುವುದರ ಜೊತೆಗೆ ನಿಯಮ ಪಾಲಿಸುವವರ ಜೀವಕ್ಕೂ ಎರವಾಗುತ್ತಾರೆ. ಹೀಗಾಗಿ, ಎಲ್ಲರು ಸಂಚಾರಿ ನಿಯಮ ಪಾಲಿಸುವ ಮೂಲಕ ಸುರಕ್ಷತೆಯಾಗಿರೋಣ ಎಂದು ಕಿವಿ ಮಾತು ಹೇಳಿದರು.
ನಿಯಮ ಉಲ್ಲಂಘಿಸುವವರ ಬಗ್ಗೆ ಸಂಚಾರ ಠಾಣೆ ಪೊಲೀಸರು ಹಾಗೂ ವೃತ್ತಗಳಲ್ಲಿ ಸಿಸಿ ಟಿವಿಗಳ ಮೂಲಕ ನಿಗಾ ಇಡಲಾಗುತ್ತಿದೆ. ದಂಡ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ ರಿಯಾಯಿತಿ ನೀಡುವುದಿಲ್ಲ. ಆದರೆ, ಕೆಲವರು ಸಂಘಟಿತವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬಾರದು ಎಂಬ ಅಭಿಯಾನ ಮಾಡುತ್ತಾರೆ. ಈ ವಿಚಾರದಲ್ಲಿ ಮನ್ನಣೆ ನೀಡುವುದಿಲ್ಲ ಎಂದು ತಿಳಿಸಿದರು.
ನೋ ಪಾರ್ಕಿಂಗ್ ಅಥವಾ ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿರುವುದನ್ನು ವಿಡಿಯೋ ಮಾಡಿಕೊಳ್ಳಬೇಕು. ನಂತರ ಧ್ವನಿವರ್ಧಕದಲ್ಲಿ ವಾಹನದ ಸಂಖ್ಯೆ ಪ್ರಕಟಿಸಬೇಕು. ಬಳಿಕ ಟೋಯಿಂಗ್ ಮಾಡಬೇಕು ಎಂದು ಸಂಚಾರ ಪೊಲೀಸರಿಗೂ ತಿಳಿಸಿದರು.
ನಿಯಮ ಉಲ್ಲಂಘಿಸಿದವರು ಸ್ಥಳದಲ್ಲೇ ದಂಡ ವಿಧಿಸಬಾರದು ಎಂದು ಹೇಳುತ್ತಾರೆ. ನೋಟಿಸ್ ನೀಡಿ ದಂಡ ವಿಧಿಸಿದರೆ ಯಾರು ದಂಡ ಪಾವತಿಸುವುದಿಲ್ಲ. ಈಗ ದಂಡ ವಿಧಿಸಿರುವವರ ಪೈಕಿ ಶೇ.2ರಷ್ಟು ಮಂದಿ ದಂಡ ಪಾವತಿಸಿಲ್ಲ. ಹೀಗಾಗಿ, ಸ್ಥಳದಲ್ಲೇ ದಂಡವಿಧಿಸುವುದು ಅನಿವಾರ್ಯ ಎಂದು ಹೇಳಿದರು.
ಡ್ರಗ್ಸ್ ಕುರಿತು ಮಾಹಿತಿ ನೀಡಿ :ಮಾದಕ ವಸ್ತು ಮಾರಾಟ ಮಾಡುವ ಜಾಲದ ಬಗ್ಗೆ ತಿಳಿದಿದ್ದರೆ ಸಾರ್ವಜನಿಕರು ಮಾಹಿತಿ ನೀಡಬೇಕು. ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಈಗಾಗಲೇ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ 52 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಐದು ಸಾವಿರ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೋಧ ಕಾರ್ಯಗಳು ಮುಂದುವರಿದಿದೆ.
ವಕೀಲರ ನೇಮಕಕ್ಕೆ ಜನರು ಸ್ವತಂತ್ರರು :ಪ್ರಕರಣದ ಸಂಬಂಧ ಕೆಲವು ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳು ಹೇಳಿದ ವಕೀಲರ ಮೂಲಕ ನ್ಯಾಯಾಂಗಕ್ಕೆ ತೆರಳಿದರೆ ಸಹಾಯ ಮಾಡುವುದಾಗಿ ತಿಳಿಸುತ್ತಾರೆ ಎಂದು ಸಾರ್ವಜಿನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಪ್ರಕರಣ ಸಂಬಂಧ ವಕೀಲರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಪ್ರತಿಯೊಬ್ಬರು ಸರ್ವ ಸ್ವತಂತ್ರರಿದ್ದಾರೆ. ಆ ರೀತಿ ವಕೀಲರನ್ನು ನೇಮಕ ಮಾಡುವಂತೆ ಒತ್ತಾಯಿಸಿದ ಅಧಿಕಾರಿಗಳ ಹೆಸರು ಮತ್ತು ಠಾಣೆಯ ಬಗ್ಗೆ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.
ರೋಡ್ ರೋಮಿಯೊಗಳ ಹೆಡೆಮುರಿ :ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿಕೊಂಡು ರಸ್ತೆಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನು ಚೂಡಾಯಿಸುವ ಬಗ್ಗೆ ನರಸಪುರ ಮತ್ತು ವಿದ್ಯಾರಣ್ಯಪುರದಿಂದ ಹಲವು ಕಡೆಗಳಲ್ಲಿ ದೂರು ಬಂದಿವೆ. ಇಂತಹ ಸ್ಥಳಗಳಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಲಾಗಿದೆ. ಅಧಿಕೃತ ಸ್ಥಳವಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಸ್ಥಳಗಳ ಮೇಲೆ ದಾಳಿ ನಡೆಸಿ ಚೂಡಾಯಿಸುವವರ ಹೆಡೆಮುರಿಕಟ್ಟಲಾಗುವುದು ಎಂದು ತಿಳಿಸಿದರು.
ಲಂಚ ತೆಗೆದುಕೊಳ್ಳುವವರ ವಿರುದ್ಧ ದೂರು ನೀಡಿ: ಕೆಲವು ಪೊಲೀಸರು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವ ಪೊಲೀಸರು ನಿಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತಹವರ ವಿರುದ್ಧ ದೂರು ನೀಡಿ ಅಥವಾ, ಗೌಪ್ಯವಾಗಿ ನಮಗೆ ಮಾಹಿತಿ ನೀಡಿ. ಯಾವುದೇ ಮೂಲಾಜಿಲ್ಲದೆ ಭ್ರಷ್ಟ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಉದಾಹರಣೆ ಎಂಬಂತೆ ಪ್ರಸಕ್ತ ಒಂದು ವರ್ಷದಲ್ಲಿ ಭ್ರಷ್ಟಾಚಾರವೆಸಗಿದ ಆರೋಪದಡಿ 22 ಪೊಲೀಸರು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಧ್ವನಿ ವರ್ಧಕಗಳ ಬಳಸುವವರ ವಿರುದ್ಧ ಕ್ರಮ: ತರಕಾರಿ ಮಾರುವ ಬೀದಿಬದಿ ವ್ಯಾಪಾರಿಗಳು ಹಾಗೂ ಕೆಲವು ಅಂಗಡಿಗಳಲ್ಲಿ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಪೊಲೀಸರ ಪರವಾನಿಗೆ ಪಡೆಯದೆ ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಸೈಲೆನ್ಸರ್ ಪೈಪ್ ಮಾರ್ಪಡಿಸಿ ಹೆಚ್ಚು ಶಬ್ಧ ಬರುವಂತೆ ಓಡಿಸುತ್ತಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಹೇಳಿದರು.
ಪೊಲೀಸರು ಹೆಲ್ಮೆಟ್ ಧರಿಸುವುದಿಲ್ಲ: ಪೊಲೀಸರು ಹೆಲ್ಮೆಟ್ ಧರಿಸುವುದಿಲ್ಲ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ ಎಂಬ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯೆಸಿದ ನಗರ ಆಯುಕ್ತ ಕಮಲ್ ಪಂತ್, ಸಂಚಾರ ನಿಯಮ ಉಲ್ಲಂಘಿಸಿರುವ ದಾಖಲೆಗಳಿದ್ದರೆ ಕಂಡಿತ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶೇ. 95 ರಷ್ಟು ಪೊಲೀಸರು ನಿಯಮ ಪಾಲನೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಉಲ್ಲಂಘಿಸಿರುವ ದಾಖಲೆಗಳಿದ್ದರೆ ನೇರವಾಗಿ ನಮಗೆ ಸಲ್ಲಿಸಬಹುದು. ಸಂಚಾರ ನಿಯಮ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.