ಬೆಂಗಳೂರು: ಮುಂಬೈನ ರೆಡ್ ಲೈಟ್ ಏರಿಯಾದ ಮಾದರಿಯಲ್ಲೇ ನಗರದ ಲಾಡ್ಜ್ ವೊಂದರಲ್ಲಿ ಸಿಕ್ರೆಟ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಅದು ಹೆಸರಿಗೆ ಮಾತ್ರ ಲಾಡ್ಜ್. ಅಲ್ಲಿ ನಡೆಯುತ್ತಿದ್ದುದು ಮಾತ್ರ ಹೈಟೆಕ್ ವೇಶ್ಯಾವಾಟಿಕೆ.
ಹೌದು, ಅದು ಎಷ್ಟು ಹೈಟೆಕ್ ಅಂದ್ರೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವುದಕ್ಕೆಂದೇ ಲಾಡ್ಜ್ನ ರೂಮ್ ವೊಂದರಲ್ಲಿ ಸಿಕ್ರೆಟ್ ರೂಮ್ಗಳನ್ನ ಮಾಡಲಾಗಿತ್ತು. ಸಿಸಿಬಿ ಕಚೇರಿಯ ಬಳಿಯೇ ಇರುವ ಈ ಲಾಡ್ಜ್. ಈ ಲಾಡ್ಜ್ನಲ್ಲಿ ಕೆಲವು ರೂಮ್ಗಳಲ್ಲಿ ವಿವಿಧ ರಾಜ್ಯಗಳಿಂದ ಬಂದವರು ಬಾಡಿಗೆಗೆ ಇದ್ದಾರೆ. ಇನ್ನು, ಖಾಲಿ ಇರುವ ಕೋಣೆಗಳಲ್ಲಿ ಈ ದಂಧೆ ನಡೆಯುತ್ತದೆ. ಇಲ್ಲಿ ಪೊಲೀಸರ ದಾಳಿ ನಡೆದರೆ ಸಾಕು, ದಂಧೆಯಲ್ಲಿ ತೊಡಗಿರುವ ಯುವತಿಯರನ್ನು ಈ ಸಿಕ್ರೆಟ್ ಕೋಣೆ ಒಳಗೆ ಹಾಕಿ ಲಾಕ್ ಮಾಡುತ್ತಾರಂತೆ.
ಇತ್ತೀಚೆಗೆ ಅಂದ್ರೆ ಕಳೆದ 7ರಂದು ಸಿಸಿಬಿ ಪೊಲೀಸರು ಈ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರಿಗೆ ಏನೋ ಅನುಮಾನ ಬಂದು ಹುಡುಕಾಡಿದಾಗ ಈ ಸಿಕ್ರೆಟ್ ರೂಮ್ ಬಗ್ಗೆ ವಿಷಯ ತಿಳಿದಿದೆ. ಏನಿದೆ ಅಂತ ಹುಡುಕಾಡಿ ನೋಡಿದಾಗ ಹೊರ ರಾಜ್ಯದ ಇಬ್ಬರು ಯುವತಿಯರನ್ನು ಈ ಸಿಕ್ರೆಟ್ ರೂಮ್ನಲ್ಲಿ ಲಾಕ್ ಮಾಡಿರೋದು ಗೊತ್ತಾಗಿದೆ.
ಬೆಂಗಳೂರಿನ ಲಾಡ್ಜ್ನಲ್ಲಿ ಸಿಕ್ರೆಟ್ ವೇಶ್ಯಾವಾಟಿಕೆ ಉಸಿರುಗಟ್ಟಿಸುವ ಸಿಕ್ರೆಟ್ ರೂಮ್ಗಳು.. ಲಾಡ್ಜ್ನ ನಾಲ್ಕನೇ ಮಹಡಿಯಲ್ಲಿ ಒಂದು ಪುಟ್ಟ ಕೋಣೆ ಇದೆ. ಆ ಕೋಣೆಯನ್ನು ಅಡುಗೆ ಮನೆಯಂತೆ ಮಾಡಲಾಗಿದೆ. ಅಲ್ಲಿ ಗ್ಯಾಸ್ ಪೈಪ್ ಕನೆಕ್ಷನ್, ಕುಡಿಯುವ ನೀರಿನ ವ್ಯವಸ್ಥೆ ಇದೆ. ಯಾರಾದ್ರೂ ನೋಡಿದ್ರೆ ಇದು ಕಿಚನ್ ಅಂತ ಸುಮ್ಮನಾಗುತ್ತಾರೆ. ಅದರ ಗೋಡೆಯ ಕೆಳ ಭಾಗದಲ್ಲೇ ಸಿಕ್ರೆಟ್ ರೂಮ್ಗೆ ಹೋಗಲು ಒಂದು ಪುಟ್ಟದಾಗಿ ಕಿಂಡಿಯಂತೆ ಡೋರ್ ಮಾಡಲಾಗಿದೆ. ಅದೂ ಕೂಡ ಗೋಡೆಯ ಭಾಗದಂತೆ ಕಾಣುತ್ತೆ.
ಆದ್ರೆ ಆ ಪುಟ್ಟ ಬಾಗಿಲನ್ನ ತಳ್ಳಿದ್ರೆ ಸಾಕು ತೆರೆದುಕೊಳ್ಳುತ್ತೆ ಆ ಕೊಳಕು ಸಿಕ್ರೆಟ್ ರೂಮ್. ಪ್ಲಾಸ್ಟರಿಂಗ್ ಮಾಡದೆ ಹಾಗೇ ಇರುವ ಗೋಡೆಗಳು... ಕೋಣೆಯಲ್ಲಿ ಸರಿಯಾಗಿ ಗಾಳಿ ಆಡೋಕಾಗದ ಜಾಗವಿದು... ಬೆಳಕಂತೂ ಇಲ್ಲವೇ ಇಲ್ಲ. ಇನ್ನು ಇಲಿಗಳ ಕಾಟ ಬೇರೆ. ಒಂದು ಕುಡಿಯುವ ನೀರಿಗಾಗಿ ಒಂದು ಟ್ಯಾಪ್ ವ್ಯವಸ್ಥೆ ಇದೆ. ಬಿಟ್ಟರೆ ಉಸಿರಾಡಲು ಕಷ್ಟವಾಗುವಷ್ಟು ಧೂಳು. ಇಂತಹ ಕೋಣೆಯೊಳಗೆ ಹೋಗುತ್ತಿದ್ದಂತೆಯೇ ಮತ್ತೊಂದು ಸಿಕ್ರೆಟ್ ರೂಮ್ನ ಡೋರ್ ತೆರೆದುಕೊಳ್ಳುತ್ತೆ.
ಈ 2 ರೂಮ್ಗಳಲ್ಲಿ 10-12 ಜನರನ್ನು ಇರಿಸಬಹುದಾಗಿದೆ. ಆದ್ರೆ ತುಂಬಾ ಸಮಯ ಹೀಗೆ ಯಾರನ್ನಾದರೂ ಇಟ್ಟರೆ ಅಷ್ಟೇ, ಅವರು ಉಸಿರುಗಟ್ಟಿ ಸಾಯಬೇಕಷ್ಟೆ. ಕಳೆದ 7ರಂದು ಸಿಸಿಬಿ ಪೊಲೀಸ್ರು ಸಿಟಿ ಮಾರ್ಕೆಟ್ ನ ವಾಸವಿ ಲಾಡ್ಜ್, ಕಲಾಸಿಪಾಳ್ಯದ ಹೋಟೆಲ್ ಬೋರ್ಡಿಂಗ್ ಅಂಡ್ ಲಾಡ್ಜ್ ಹಾಗೂ ಕಾಟನ್ ಪೇಟೆಯ ಈ ಲಾಡ್ಜ್ ಮೇಲೆ ದಾಳಿ ನಡೆಸಿದ್ರು. ಈ ವೇಳೆ ಲಾಡ್ಜ್ನಲ್ಲಿ ಸಿಕ್ರೆಟ್ ಪತ್ತೆಯಾಗಿತ್ತು. ಅದರಲ್ಲಿದ್ದ ಇಬ್ಬರು ಯುವತಿಯರು ಸೇರಿದಂತೆ ಒಟ್ಟು 7 ಮಹಿಳೆಯರನ್ನ ರಕ್ಷಿಸಿರುವ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ :ಟಾಕಿಂಗ್ ಟಾಮ್ ಮಾದರಿಯ ಬೊಂಬೆಯೊಳಗೆ ಡ್ರಗ್ಸ್ ಇಟ್ಟು ಮಾರಾಟ.. ಬೆಂಗಳೂರಲ್ಲಿ ಮೂವರ ಬಂಧನ