ಬೆಂಗಳೂರು:ಬೆಂಗಳೂರಿನಲ್ಲಿ ಭಯೋತ್ಪಾದನೆ ದಾಳಿ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಆರ್‌ಟಿ ನಗರ ಪೊಲೀಸರು ಶಂಕಿತ ಉಗ್ರನ ಸಹಚರನನ್ನು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ಈವರೆಗೂ 6 ಮಂದಿಯನ್ನು ಬಂಧಿಸಿದಂತಾಗಿದೆ. ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅರ್ಷದ್ ಖಾನ್ ಬಂಧಿತ ಆರೋಪಿ.
ಬಂಧಿತ ಅರ್ಷದ್ಖಾನ್ ಈ ಹಿಂದೆ ಬಂಧಿತರಾದ ಐವರು ಶಂಕಿತ ಉಗ್ರರ ನಿಯಂತ್ರಿಸುತ್ತಿದ್ದ ಜುನೈದ್ನ ಮತ್ತೋರ್ವ ಸಹಚರನಾಗಿದ್ದಾನೆ. 2017ರಲ್ಲಿ ನೂರ್ ಅಹಮ್ಮದ್ ಎಂಬಾತನನ್ನ ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ಅರ್ಷದ್ ಖಾನ್ ಅಪ್ರಾಪ್ತ ಆರೋಪಿಯಾಗಿದ್ದ. ಅದಾದ ಬಳಿಕ ಕೊಲೆ, ಕೊಲೆಯತ್ನ, ರಾಬರಿ ಸೇರಿದಂತೆ 17ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಅರ್ಷದ್ ಖಾನ್ ನಟೋರಿಯಸ್ ಆಗಿ ಗುರುತಿಸಿಕೊಂಡಿದ್ದ. ಸಾಕಷ್ಟು ಬಾರಿ ಪೊಲೀಸರು ಬಂಧನಕ್ಕೆ ಬಂದಾಗ ಕತ್ತು ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡುತ್ತಿದ್ದ.
ಆದರೆ, ಆಗಸ್ಟ್ 27ರ ಮುಂಜಾನೆ 5 ಗಂಟೆಗೆ ಅರ್ಷದ್ ಖಾನ್ ಆರ್.ಟಿ.ನಗರದ ಮನೆಯೊಂದರಲ್ಲಿ ಇರುವುದರ ಕುರಿತು ಮಾಹಿತಿ ಪಡೆದ ಪೊಲೀಸರು ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಆರೋಪಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ನಂತರ, ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಸಹ ಮನೆಯಲ್ಲಿದ್ದ ಚಾಕು ತೆಗೆದುಕೊಂಡಿದ್ದ ಅರ್ಷದ್ ಖಾನ್ ಕತ್ತು ಕೊಯ್ದುಕೊಳ್ಳುವ ಹೈಡ್ರಾಮಾ ಮಾಡಿದ್ದ. ಅಲ್ಲದೇ ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಓಡಿದ್ದ. ಆದರೆ, ಈತನನ್ನು ಅಡ್ಡಗಟ್ಟಿ ಹೆಡೆಮುರಿ ಕಟ್ಟಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಆದರೆ, ಆ ಐವರಿಗೆ ಗ್ರೆನೇಡ್ ಸರಬರಾಜು ಮಾಡಿದ್ದ ಪ್ರಮುಖ ಆರೋಪಿ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಪ್ರಸ್ತುತ ಜುನೈದ್ ಸಂಪರ್ಕದಲ್ಲೇನಾದರೂ ಇದ್ದನಾ? ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನಾ ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.