ಬೆಂಗಳೂರು: ತುರ್ತು ಸೇವೆ ನೀಡುತ್ತಿರುವ ಕ್ಯಾಬ್ ಚಾಲಕರಿಗೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಚಾಲಕರು ಕೇವಲ ತುರ್ತು ಸೇವೆಯನ್ನು ನೀಡುತ್ತಿದ್ದಾರೆ.
ಇವರು ತಮ್ಮ ಸೇವೆಯನ್ನು ನೀಡಿ ಖಾಲಿ ಕಾರಿನಲ್ಲಿ ಮನೆಗೆ ತೆರಳಬೇಕಾದರೆ ಇವರುಗಳನ್ನು ಅಡ್ಡಗಟ್ಟಿ ಕಾರು ನಿಲ್ಲಿಸಿ ಕಾರುಗಳನ್ನು ಸೀಝ್ (ಜಪ್ತಿ) ಮಾಡುವ ಕೆಲಸ ಮತ್ತು ಹಣ ಪಡೆದುಕೊಳ್ಳುವ ಕೆಲಸಗಳು ನಡೆಯುತ್ತಿವೆ ಎಂದು ಓಲಾ- ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಲಾ-ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಕಿಡಿ ಎಲ್ಲಾ ದಾಖಲಾತಿಗಳನ್ನು ನೀಡಿದರೂ ಪೊಲೀಸರು ಕೇಳದೆ ಚಾಲಕರ ಮೇಲೆ ಗೂಂಡಾ ವರ್ತನೆ ನಡೆಸುತ್ತಿದ್ದಾರೆ. ಈ ದಿನ ನಮ್ಮ ಸಂಘಟನೆಯ ಸದಸ್ಯರಾದ ಸುರೇಶ್ ಎಂಬವರು ಏರ್ಪೋರ್ಟ್‌ಗೆ ಡ್ರಾಪ್ ಮಾಡಿ ವಾಪಸ್ ಮನೆಗೆ ಹೋಗುವಾಗ ಅವರ ಕೆಎಸ್ಟಿಡಿಸಿ ನಲ್ಲಿ ಓಡಿಸುತ್ತಿರುವ ಈಟಿಯೋಸ್ KA02AH5000 ವಾಹನವನ್ನು ಗೊರಗುಂಟೆ ಪಾಳ್ಯದ ಹತ್ತಿರ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವಾಹನವನ್ನು ಹಿಡಿದು ಜಪ್ತಿ ಮಾಡಿದ್ದಾರೆ.
ಚಾಲಕ ಪ್ರಶ್ನೆ ಮಾಡಿದ್ದಕ್ಕೆ ಚಾಲಕನಿಗೆ ಹೊಡೆದಿರುತ್ತಾರೆ ಇದು ಯಾವ ನ್ಯಾಯ? ಎಂದು ತನ್ವೀರ್ ಪ್ರಶ್ನಿಸಿದ್ದಾರೆ. ಇದೇ ರೀತಿ ಮುಂದುವರಿದರೆ ನಾವುಗಳು ನಮ್ಮ ಚಾಲಕರಿಗೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲು ಸಂದೇಶವನ್ನು ನೀಡಬೇಕಾಗುತ್ತದೆ ಮತ್ತು ನಮ್ಮ ಕೆಲವು ಟ್ಯಾಕ್ಸಿ ಚಾಲಕರು ಆ್ಯಂಬುಲೆನ್ಸ್ ಚಾಲಕರಾಗಿ ಸಹ ಕೆಲಸ ನಿರ್ವಹಿಸುತ್ತಿದ್ದಾರೆ.
ಅವರಿಗೂ ಸಹ ತಮ್ಮ ಕೆಲಸಗಳಿಂದ ಹಿಂದೆ ಸರಿಯಲು ನಾವು ಸೂಚನೆ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಗೆ ನೀಡಿದ್ದಾರೆ. ಈಗಿನ ಪರಿಸ್ಥಿತಿಯನ್ನು ಈ ಪೊಲೀಸರೇ ನಿಭಾಯಿಸಲಿ, ತುರ್ತು ಸೇವೆಗಳನ್ನು ನೀಡಲಿ, ಈ ಸರಕಾರ ಮತ್ತು ಪೊಲೀಸರೇ ಎಲ್ಲವುದ್ದಕ್ಕೂ ಜವಾಬ್ದಾರರಾಗಲಿ.
ಇಂತಹ ಪರಿಸ್ಥಿತಿಯಲ್ಲಿ ಜೀವವನ್ನು ಪಣಕ್ಕಿಟ್ಟು ತುರ್ತು ಹಾಗೂ ಅಗತ್ಯ ಸೇವೆ ನೀಡುತ್ತಿರುವ ಚಾಲಕರಿಗೆ ಅನ್ಯಾಯವಾಗುತ್ತಿದ್ದರೆ ನಾವು ಸುಮ್ಮನೆ ನೋಡುತ್ತಾ ಕೂರಲು ಆಗುವುದಿಲ್ಲ ಎಂದು ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.