ಬೆಂಗಳೂರು:ಕಲುಷಿತ ನೀರು ಸೇವಿಸಿ ಒಂದೇ ಅಪಾರ್ಟ್‌ಮೆಂಟ್‌ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ನಗರದ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆಯಿಂದ ಜ್ವರ, ವಾಂತಿ, ಭೇದಿಯಿಂದ ಮಕ್ಕಳು ಬಳಲುತ್ತಿದ್ದಾರೆ. ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಮತ್ತಿಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳಂದೂರು ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಲುಷಿತ ನೀರು ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಅಪಾರ್ಟ್‌ಮೆಂಟ್‌ನ ಬಿಲ್ಡರ್ಸ್ ವಿರುದ್ಧ ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಕ್ಕಳು ಅಸ್ವಸ್ಥ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಬಳಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲುಷಿತ ನೀರು ಸೇವಿಸಿ ವೃದ್ಧೆ ಸಾವು:ಇತ್ತೀಚೆಗೆಕಲುಷಿತ ನೀರು ಸೇವಿಸಿ ವೃದ್ಧೆಯೊಬ್ಬರು ಸಾವನ್ನಪ್ಪಿ 15ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಏರುಪೇರಾದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿತ್ತು. ಹೊನ್ನಮ್ಮ ಶಿವಪ್ಪ (65) ಎಂಬ ಮಹಿಳೆ ಸಾವನ್ನಪ್ಪಿದ್ದರು. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಸುಮಾರು ಹದಿನೈದಕ್ಕೂ ಹೆಚ್ಚು ಜನ ಕನಕಗಿರಿ, ಗಂಗಾವತಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು.