ಬೆಂಗಳೂರು:ಕೆಎಸ್ಆರ್‌ಟಿಸಿ ಪ್ರಥಮ ಅಂತರ-ನಗರ (Prototype ) ಎಲೆಕ್ಟ್ರಿಕ್ ಬಸ್ನ (EV Bus) ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿದ್ದು, ಜನವರಿ 16 ರಿಂದ ಬೆಂಗಳೂರು ಮೈಸೂರು ನಡುವೆ ಇ ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ. ಟಿಕೆಟ್ ದರವೂ ಕ್ಲಬ್ ಕ್ಲಾಸ್ ದರಕ್ಕಿಂತ ಕಡಿಮೆ ನಿಗದಿಪಡಿಸಲಾಗಿದೆ.
ಇಂದು ಇವಿ ಪವರ್ ಪ್ಲಸ್ ಬಸ್ ಪ್ರಾಯೋಗಿಕ ಚಾಲನೆ ಕೂಡ ಬೆಂಗಳೂರು - ರಾಮನಗರ ನಡುವೆ ನಡೆಸಲಾಯಿತು. ನಿರೀಕ್ಷೆಯಂತೆಯೇ ಎಲ್ಲಾ ತಪಾಸಣೆಯಲ್ಲಿಯೂ ಇ ಬಸ್ ಸಕಾರಾತ್ಮಕ ಫಲಿತಾಂಶ ನೀಡಿದ್ದು, ಸೋಮವಾರದಿಂದ ಬೆಂಗಳೂರು ಮೈಸೂರು ನಡುವೆ ಬಸ್ ಕಾರ್ಯಾಚರಣೆ ನಡೆಸಲಿದೆ. ಐರಾವತ ಕ್ಲಬ್ ಕ್ಲಾಸ್ ಪ್ರಯಾಣ ದರಕ್ಕಿಂತ ರೂ.30 ಕಡಿಮೆ ದರವನ್ನು ನಿಗದಿಪಡಿಸಲಾಗಿದೆ. ಮುಂದಿನ 49 ಬಸ್ಗಳು ಫೆಬ್ರವರಿ ಎರಡನೇ ವಾರದಲ್ಲಿ ಸೇರ್ಪಡೆಯಾಗಲಿದ್ದು, ಬೆಂಗಳೂರು ದಾವಣಗೆರೆ, ಬೆಂಗಳೂರು ಚಿಕ್ಕಮಗಳೂರು, ಬೆಂಗಳೂರು ಶಿವಮೊಗ್ಗ, ಬೆಂಗಳೂರು ಮಡಿಕೇರಿ, ಬೆಂಗಳೂರು ವಿರಾಜಪೇಟೆ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಗಳನ್ನು ಕಾರ್ಯಾಚರಣೆಗೊಳಿಸಲಿದೆ. ಸದ್ಯ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಮೈಸೂರಿಗೆ ಮೊದಲ ಇ ಬಸ್ ಸೇವೆ ಒದಗಿಸಲಿದೆ.
ದರ ನಿಗದಿ:ಇ ಬಸ್ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಸ್ತುತ ಐರಾವತ ಬಸ್ ದರ 291 ರೂ. ಇದ್ದು ಐರಾವತ ಕ್ಲಬ್ ಕ್ಲಾಸ್ನಲ್ಲಿ 331 ರೂ. ಇದೆ .ಆದರೆ ಹೊಸದಾಗಿ ರಸ್ತೆಗಿಳಿಯುತ್ತಿರುವ ಇವಿ ಪವರ್ ಪ್ಲಸ್ ಬಸ್ ದರ 301 ರೂ. ಗಳಾಗಿದ್ದು, ಕ್ಲಬ್ ಕ್ಲಾಸ್ಗಿಂತ 30 ರೂ. ಕಡಿಮೆ ಇರಲಿದೆ.