ಬೆಂಗಳೂರು:ಬ್ಯಾಡರಹಳ್ಳಿಯಲ್ಲಿ ನಡೆದಿದ್ದ ಪೇಂಟಿಂಗ್ ಕೂಲಿ ಕಾರ್ಮಿಕನ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನ್ನ ಪತ್ನಿಯ ಜತೆಗಿನ ಸಲುಗೆಯನ್ನು ತೊರೆಯುವಂತೆ ಎಚ್ಚರಿಸಿದ್ದ ಸ್ನೇಹಿತನನ್ನೇ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಉತ್ತರಪ್ರದೇಶ ಮೂಲದ ರಾಹುಲ್ ಕುಮಾರ್ ಅಲಿಯಾಸ್ ಚೋಟಾಲಾಲ್ (25) ಬಂಧಿತ. ತನ್ನ ಸ್ನೇಹಿತ ಕೇದಾರ್ ಸಹಾನಿ (45) ಹತ್ಯೆಯಾದವ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಉತ್ತರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಕೇದಾರ್ ಮತ್ತು ರಾಹುಲ್ ಕಳೆದ ಎರಡು ತಿಂಗಳಿಂದ ಆಂಧ್ರಹಳ್ಳಿಯ ಪ್ರಸನ್ನ ಲೇಔಟ್ನಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ನಿರ್ಮಾಣ ಹಂತದ ಅಪಾರ್ಟ್ಮೆಂಟ್ನ ಕೊಠಡಿಯಲ್ಲಿ ನೆಲೆಸಿದ್ದರು. ಇದೇ ಅಪಾರ್ಟ್ಮೆಂಟ್ನ ಮತ್ತೊಂದು ಕೊಠಡಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಬೆಟ್ಟಸ್ವಾಮಿ ಎಂಬಾತ ನೆಲೆಸಿದ್ದ. ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೇದಾರ್ ಮತ್ತು ಚೋಟಾಲಾಲ್ನ ಪರಿಚಯವಾಗಿತ್ತು. ಮೂವರು ಸೇರಿ ರಾತ್ರಿ ಮದ್ಯ ಸೇವಿಸಿ, ತಮ್ಮ ಕೊಠಡಿಗೆ ಹೋಗಿ ಮಲಗಿದ್ದರು. ನಸುಕಿನ ಜಾವ 5 ಗಂಟೆಯಲ್ಲಿ ಎಚ್ಚರಗೊಂಡಿದ್ದ ರಾಹುಲ್, ಬೆಟ್ಟಸ್ವಾಮಿಗೆ ಕಟ್ಟಡದ ಗೇಟ್ ಕೀ ಕೊಟ್ಟು ಹೋಗಿದ್ದ. ಇದಾದ ನಾಲ್ಕೈದು ದಿನಗಳ ಬಳಿಕ ಕಟ್ಟಡದ ಸಮೀಪದ ದುರ್ವಾಸನೆ ಬಂದಿದ್ದು, ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು.
ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಹತ್ಯೆ ಎಂಬುದು ದೃಢಪಟ್ಟಿತ್ತು. ಈ ಕುರಿತು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದಾಗ, ಕೇದಾರ್ನ ಸ್ನೇಹಿತ ರಾಹುಲ್ ಮೇಲೆ ಶಂಕೆ ವ್ಯಕ್ತವಾಗಿತ್ತು. ಮೊಬೈಲ್ ಕರೆಗಳ ವಿವರ ಆಧರಿಸಿ ಗೋರಕ್ಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತಂದು ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.