ಬೆಂಗಳೂರು:ಸುಮಾರು ಮೂರುವರೆ ವರ್ಷದ ಹೆಣ್ಣು ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ಘಟನೆ ನಡೆದಿದೆ. ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ ಬದುಕುಳಿದಿದ್ದು, ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡು ಮೂಲದ ಗಾಯತ್ರಿದೇವಿ ಹಾಗೂ ನರೇಂದ್ರನ್ ದಂಪತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಇವರಿಗೆ ಸಂಯುಕ್ತಾ ಎಂಬ ಮಗಳಿದ್ದಾಳೆ. ನರೇಂದ್ರನ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ 20 ದಿನಗಳ ಹಿಂದೆ ಈರೋಡ್ನಲ್ಲಿ ವಾಸವಾಗಿದ್ದ ನರೇಂದ್ರನ್ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಊರಿಗೆ ಹೋಗಿದ್ದ ಅವರು ಸೋಮವಾರ ಮುಂಜಾನೆ ವಾಪಸ್ ಆಗಿದ್ದರು. ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಲವಾಗಿ ಬಾಗಿಲು ತಳ್ಳಿದ್ದಾರೆ. ಒಳಗಡೆಯಿಂದ ಸರಿಯಾಗಿ ಲಾಕ್ ಆಗದ ಕಾರಣ ತಕ್ಷಣ ಬಾಗಿಲು ತೆರೆದುಕೊಂಡಿದೆ.
ಒಳಪ್ರವೇಶಿಸಿದಾಗ ಮಗುವನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದು ಗೊತ್ತಾಗಿದೆ. ಗಾಯಿತ್ರಿದೇವಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದನ್ನು ನೋಡಿದ ನರೇಂದ್ರನ್ ಆತಂಕದಿಂದಲೇ ಪತ್ನಿಯನ್ನು ಕೆಳಗಿಳಿಸಿದಾಗ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.