ಬೆಂಗಳೂರು: ಆದಷ್ಟು ಬೇಗ ಬಿಬಿಎಂಪಿ ಎಸ್ಐಟಿ ತನಿಖೆ ಪೂರ್ಣಗೊಳಿಸಿ, ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಶಾಸಕರು ಸಿಎಂ ನಡೆಸಿದ ಸಭೆಯಲ್ಲಿ ಒತ್ತಾಯಿಸಿದರು. ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ, ಪ್ರಮುಖವಾಗಿ ಬಾಕಿ ಬಿಲ್, ಅಭಿವೃದ್ಧಿ ಸಂಬಂಧ ಹೆಚ್ಚಿನ ಚರ್ಚೆ ನಡೆಸಲಾಯಿತು. ಉಳಿದಂತೆ ಕ್ಷೇತ್ರದ ಅಭಿವೃದ್ಧಿ, ಅನುದಾನ, ಸರ್ಕಾರ- ಪಕ್ಷದ ಜತೆಗಿನ ಸಮನ್ವಯ, ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ 10 ಬೆಂಗಳೂರು ಕೈ ಶಾಸಕರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಡಿ.ಕೆ.ಸುರೇಶ್ ಪಾಲ್ಗೊಂಡಿದ್ದರು. ಆದಷ್ಟು ಬೇಗ ಗುತ್ತಿಗೆದಾರ ಬಾಕಿ ಬಿಲ್ ಪಾವತಿಸಬೇಕು. ಇಲ್ಲವಾದರೆ ಕಾಮಗಾರಿಗಳು ಬಾಕಿ ಉಳಿಯುತ್ತವೆ. ಇಲ್ಲವೇ ಮುಂಬರುವ ಬಿಬಿಎಂಪಿ ಎಲೆಕ್ಷನ್‌ಗೆ ಡ್ಯಾಮೇಜ್ ಆಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ SIT ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಅರ್ಧಕ್ಕೆ ನಾವು ಹಿಂಪಡೆಯಲು ಆಗೋದಿಲ್ಲ. ಈಗಾಗಲೇ 10 ದಿನದ ತನಿಖೆ ಆಗಿದೆ. ಇನ್ನು 20 ದಿನದಲ್ಲಿ ತನಿಖೆ ಮುಗಿಯಲಿದೆ. ಹೀಗಾಗಿ ಅದಕ್ಕೂ ಮುಂಚಿತವಾಗಿ ಬಿಲ್ ಬಿಡುಗಡೆ ಬೇಡ ಎಂದ ಸಿಎಂ ಹಾಗೂ ಡಿಸಿಎಂ ಮನವರಿಕೆ ಮಾಡಿದರು.
ಸಭೆಯ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, "ಬೆಂಗಳೂರು ಕೈ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಕ್ಷೇತ್ರಗಳ ಬಗ್ಗೆ, ಬೆಂಗಳೂರು ಅಭಿವೃದ್ಧಿ, ಟ್ರಾಫಿಕ್, ಒಂಟಿ ಮನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಬೆಂಗಳೂರು ವಿಧಾನಸಭಾವಾರು ಮನೆ ಕಟ್ಟಿಸಿಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರು ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಸಿದ್ದೇವೆ. ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ" ಎಂದು ವಿವರ ನೀಡಿದರು.