ಬೆಂಗಳೂರು:ಇತ್ತೀಚೆಗೆ ಸಿಟಿ ಸಿವಿಲ್ ಕೋರ್ಟ್ನಲ್ಲಿ ಗಲಾಟೆ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವಕೀಲ ಜಗದೀಶ್ ಅವರಿಗೆ ನಗರದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಜಗದೀಶ್ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಕೀಲ ಜಗದೀಶ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಅಥವಾ ಅವುಗಳ ಮೇಲೆ ಪ್ರಭಾವ ಬೀರಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಫೆ.11ರಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ವಕೀಲ ಜಗದೀಶ್ ಮತ್ತವರ ಪುತ್ರನ ಮೇಲೆ ಹಲ್ಲೆ ನಡೆದಿತ್ತು. ಗಲಾಟೆ ನಡೆಯಲು ಜಗದೀಶ್ ವಕೀಲರನ್ನು ಪ್ರಚೋದಿಸಿದರು ಎಂಬ ಆರೋಪವೂ ಕೇಳಿಬಂದಿತ್ತು. ಮರುದಿನ ಫೆ.12ರಂದು ವಕೀಲ ನಾರಾಯಣಸ್ವಾಮಿ ನೀಡಿದ್ದ ದೂರಿನಂತೆ ಕೊಲೆ ಬೆದರಿಕೆ ಹಾಗೂ ಕೊಲೆ ಯತ್ನ ಮತ್ತಿತರೆ ಆರೋಪಗಳ ಮೇರೆಗೆ ಹಲಸೂರು ಗೇಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಜಗದೀಶ್ ಅವರನ್ನು ಫೆ.14ರ ಬೆಳಗ್ಗೆ ಕೊಡಿಗೇಹಳ್ಳಿ ಮನೆಯಲ್ಲಿ ಬಂಧಿಸಿದ್ದರು. ಆ ಬಳಿಕ ನ್ಯಾಯಾಲಯ ವಕೀಲ ಜಗದೀಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇದನ್ನೂ ಓದಿ:ನನ್ನನ್ನು ನೀರಾವರಿ ಸಚಿವ, ಗೃಹ ಸಚಿವ ಈಗ ಸಿಎಂ ಮಾಡಿದ್ದು ಯಡಿಯೂರಪ್ಪನವರು : ಸಿಎಂ ಬೊಮ್ಮಾಯಿ
ವಕೀಲ ಜಗದೀಶ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಸೇರಿದಂತೆ ಹಲವು ವಕೀಲರು ಹಾಗೂ ಕರ್ನಾಟಕರ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮತ್ತಿತರರು ಪ್ರತಿಭಟನೆ ನಡೆಸಿದ್ದರು.