ಬೆಂಗಳೂರು: ಮಲ್ಲೇಶ್ವರದ ಕನ್ಯಕಾ ಪರಮೇಶ್ವರಿ ದೇವಾಲಯ ಈ ಬಾರಿ ದಸರಾ ಆಚರಣೆ ವಿಶೇಷವಾಗಿ ಅಲಂಕಾರಗೊಂಡಿದ್ದು ಭಕ್ತಾಧಿಗಳಿಗೆ ಸಾಗರದಾಳದ ಅನುಭವ ಒದಗಿಸಲು ಸಜ್ಜಾಗಿದೆ.
ಮಲ್ಲೇಶ್ವರ ಆರ್ಯವೈದ್ಯ ಸಂಘದ ಕಾರ್ಯದರ್ಶಿ ಆರ್.ಪಿ.ರವಿಶಂಕರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 'ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಿನ್ನೆಲೆ ಭವ್ಯವಾದ ಸೆಟ್ ಹಾಕಿದ್ದು, ಪ್ರಕೃತಿಗೆ ಸಂಬಂಧಿಸಿದ ವಿಷಯ ಪರಿಚಯಿಸಲು ಮುಂದಾಗಿದ್ದೇವೆ. ಸಮುದ್ರದ ಆಳದಲ್ಲಿ ನಿಂತು ಪ್ರಕೃತಿ ವಿಸ್ಮಯ ಸವಿಯುತ್ತಾ ದೇವರ ದರ್ಶನ ಮಾಡುವಂತಹ ಅಮೋಘ ಕಲಾಕೃತಿಯನ್ನು 30 ದಿನಗಳ ಕಾಲ 50 ಕ್ಕೂ ಹೆಚ್ಚು ಕುಶಲಕರ್ಮಿಗಳು ರಚಿಸಿದ್ದಾರೆ. ಕಲಾ ನಿರ್ದೇಶಕ ವಸಂತ್ ರಾವ್ ಕುಲಕರ್ಣಿ ತಂಡ ಈ ಕಲಾಕೃತಿಗಳನ್ನು ಮಾಡಿದೆ' ಎಂದರು.
ದಸರಾ ಆಚರಣೆಗೆ ಸಜ್ಜಾದ ಕನ್ಯಕಾ ಪರಮೇಶ್ವರಿ ದೇವಾಲಯ 'ಹಡಗಿನಲ್ಲಿ ಕುಳಿತು, ಬಣ್ಣಬಣ್ಣದ ಸಮುದ್ರದಾಳದ ಮೀನಿನ ಲೋಕ ಅನಾವರಣಗೊಳಿಸುತ್ತಾ, ಸಸ್ಯಕಾಶಿ ಅದ್ಭುತಗಳ ನಡುವೆ ಆದಿ ಶಕ್ತಿ ಸ್ವರೂಪಿಣಿ ವಾಸವಿ ಮಾತೆಯ ದಿವ್ಯ ದರ್ಶನ ಮಾಡಲು ಹಾಗೂ ಸಮುದ್ರ ದರ್ಶನ, ಪ್ರಕೃತಿ ವಿಸ್ಮಯಗಳನ್ನು ಮಕ್ಕಳಿಗೆ ಪರಿಚಯಿಸಲು ಇದೊಂದು ಉತ್ತಮ ಅವಕಾಶ' ಎಂದು ತಿಳಿಸಿದರು.
'ದೇವಾಲಯದ ಈ ನವರಾತ್ರಿ ಉತ್ಸವ ಹಾಗೂ ಬೊಂಬೆಗಳ ಪ್ರದರ್ಶನ ಅಕ್ಟೋಬರ್ 7 ರಿಂದ 16 ರವರೆಗೆ ನಡೆಯಲಿದ್ದು, ಸಚಿವ ಡಾ.ಅಶ್ವತ್ಥ್ ನಾರಾಯಣ ಉದ್ಘಾಟನೆಗೊಳಿಸಲಿದ್ದಾರೆ. ಪ್ರತಿ ದಿನ ಸಂಜೆ 6 ರಿಂದ ರಾತ್ರಿ 9 ರ ವರೆಗೆ ಹಾಗೂ ವಾರಾಂತ್ಯದಲ್ಲಿ ಬೆಳಗ್ಗೆ 10 ರಿಂದ 12-30, ಮತ್ತು ಸಂಜೆ 5 ರಿಂದ 9-30 ರ ವರೆಗೂ ಭಕ್ತಾದಿಗಳ ವೀಕ್ಷಣೆಗೆ ಅವಕಾಶವಿದೆ' ಎಂದು ಅವರು ಹೇಳಿದರು.