ಬೆಂಗಳೂರು:ನಗರದಲ್ಲಿ ಮತ್ತೆ ಮಳೆ ಶುರುವಾಗಿದೆ. ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೂ ತೊಂದರೆಯಾಯಿತು. ಮತ್ತೆ ಇಂದು ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದೆ.
ಮಳೆ ಅರ್ಭಟ:ನಗರದ ಮೆಜೆಸ್ಟಿಕ್, ರಾಜಾಜಿನಗರ, ಎಂಜಿ ರಸ್ತೆ, ಜಯನಗರ, ಇಂದಿರಾ ನಗರ, ಮಲ್ಲೇಶ್ವರಂ ಸೇರಿದಂತೆ ನಗರದ ಎಲ್ಲೆಡೆ ಮಳೆ ಅರ್ಭಟಿಸಿದೆ. ವರುಣನ ಈ ಅರ್ಭಟಕ್ಕೆ ವಾಹನ ಸವಾರರು ಪರದಾಡುತ್ತಿದ್ದು, ನಗರದ ಅಂಡರ್ ಪಾಸ್, ಮೇಲ್ಸೇತುವೆ ಕೆಳಗೆ ವಾಹನ ಸವಾರರು ನಿಂತು ಮಳೆಯಿಂದ ರಕ್ಷಣೆ ಪಡೆಯುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ.
ಇನ್ನೂ ಐದು ದಿನ ಮಳೆ :ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಇರುವ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಇನ್ನೂ ಐದು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ತುಮಕೂರು, ಕೋಲಾರ, ಮೈಸೂರು, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ. ತಮಿಳುನಾಡಿನ ಚೆನ್ನೈ ನಗರದಲ್ಲೂ ಭಾರಿ ಮಳೆ ಬೀಳುತ್ತಿದೆ. ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ.
ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಕೋಲಾರ, ಚಾಮರಾಜನಗರ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯೆಲ್ಲೋ ಅಲರ್ಟ್ ವೇಳೆ 64.5 ರಿಂದ 115.5 ಮಿ.ಮೀ ಮಳೆ ಬೀಳುವ ನಿರೀಕ್ಷೆ ಇದೆ.
ಭಾರಿ ಮಳೆ ಸಾಧ್ಯತೆ: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಕೊಡಗು, ಕೋಲಾರ, ಬೆಂಗಳೂರು ನಗರದ ಕೆಲವು ಕಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ದಕ್ಷಿಣ ಒಳನಾಡಿನ ಬಹುತೇಕ ಕಡೆ ಹಗುರದಿಂದ, ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಾತ್ರ ಹಗುರ ಮಳೆಯಾಗಲಿದೆ ಎಂದು ತಿಳಿಸಿದೆ.
ಬಾಯ್ತಿರೆದಿವೆ ರಸ್ತೆಗುಂಡಿಗಳು:ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ರಕ್ಕಸ ಗುಂಡಿಗಳು ಬಾಯ್ತಿರೆದಿವೆ. ಬಿಬಿಎಂಪಿ ಸೋಮವಾರದಿಂದ ರಸ್ತೆಗುಂಡಿ ಮುಚ್ಚಲು ಆರಂಭಿಸಿದೆ. ಆದರೆ ಈಗ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ, ಡಾಂಬರು ಕಿತ್ತು ಬರುವ ಸಾಧ್ಯತೆ ಇದೆ. ನಗರದ ರಸ್ತೆಗುಂಡಿಗಳು, ಹಾಗೂ ಮುಚ್ಚಿರುವ ಬಗ್ಗೆ ವಿವರವನ್ನು ಹೈಕೋರ್ಟ್ ಕೂಡಾ ವರದಿ ಕೇಳಿದೆ.
ಇದನ್ನೂ ಓದಿ:ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು!