ಬೆಂಗಳೂರು:14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಗರದ ಒರಾಯನ್ ಮಾಲ್ನಲ್ಲಿ ನಡೆಯಲಿದೆ ಎಂದು ಚಿತ್ರೋತ್ಸವದ ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಾರ್ಚ್ 23 ರಂದು ಸಂಜೆ 6 ಗಂಟೆಗೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯುವ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮಾರ್ಚ್ 30ರಂದು ನಡೆಯುವ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಅನುದಾನ ಹೆಚ್ಚಳ: ಒರಾಯನ್ ಮಾಲ್ನಲ್ಲಿ 11 ಪರದೆಗಳನ್ನು ತೆಗೆದುಕೊಳ್ಳಲಾಗಿದೆ. ಕನ್ನಡ, ತೆಲುಗು, ಇಂಗ್ಲಿಷ್ ಸೇರಿದಂತೆ ಅಂದಾಜು 300 ಸಿನಿಮಾಗಳು ಪ್ರದರ್ಶನ ಕಾಣಲಿವೆ. ಚಲನಚಿತ್ರೋತ್ಸವಕ್ಕೆ ಕಳೆದ ವರ್ಷ 4 ಕೋಟಿ ರೂ. ನೀಡಲಾಗಿತ್ತು. ಈ ವರ್ಷ 4.49 ಕೋಟಿ ರೂ. ಅನುದಾನ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ನಟ, ನಟಿಯರು ಸೇರಿದಂತೆ ಇಡೀ ಚಲನಚಿತ್ರ ಸಂಘ ಭಾಗಿಯಾಗಲಿದೆ. ಚಲನಚಿತ್ರೋತ್ಸವ ಉದ್ಘಾಟನೆಗಾಗಿ ಬಾಲಿವುಡ್ ಸೇರಿದಂತೆ ಬೇರೆ ರಾಜ್ಯದ ಒಬ್ಬರು ನಟ ಹಾಗೂ ಒಬ್ಬರು ನಟಿಯನ್ನು ಕರೆಸುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಪ್ರಶಸ್ತಿ ನಗದು ಏರಿಕೆ: ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿದೆ. ಚಲನಚಿತ್ರ ಪ್ರಶಸ್ತಿಗೆ ನಗದು ಹೆಚ್ಚಿಸಲು ತಿಳಿಸಿದ್ದೇನೆ. ಈಗ ಪ್ರಶಸ್ತಿಗೆ ಮೂರು ಲಕ್ಷ, ಎರಡು ಲಕ್ಷ ಹಾಗೂ ಒಂದು ಲಕ್ಷ ಇದೆ. ಹಾಗಾಗಿ, ನಗದು ಪ್ರಶಸ್ತಿಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅಂತಿಮವಾಗಲಿದೆ ಎಂದು ತಿಳಿಸಿದರು.