ಬೆಂಗಳೂರು: ಬೆಂಗಳೂರಿನಲ್ಲಿ ರಾಜಕಾಲುವೆ, ಉಪ ಕಾಲುವೆಗಳನ್ನು ಒತ್ತುವರಿ ಮಾಡಿ ಪ್ರವಾಹಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ, ಕೆಲ ರಾಜಕಾರಣಿಗಳನ್ನು ಮೆಚ್ಚಿಸಲು ಬಿಬಿಎಂಪಿ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಬೀದರ್ ಜಿಲ್ಲೆಯ ಹಲವು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಅವರು ಮಾತನಾಡಿದರು. ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅದನ್ನು ಹೊರತುಪಡಿಸಿ ಬರೀ ಹೇಳಿಕೆಗಳಿಂದ ಉಪಯೋಗ ಇಲ್ಲ. ಮೊದಲು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರಿಗೆ ಚಾಟಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಳೆ ಅನಾಹುತ ಬೆಂಗಳೂರು ಒಂದೇ ಕಡೆ ಅಲ್ಲ, ರಾಜ್ಯದ ಎಲ್ಲೆಡೆ ಆಗಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗುವ ಪರಿಸ್ಥಿತಿ ಬಂದಿದೆ. ಬುಧವಾರ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಆದರೆ, ಇಂತಹ ಸಭೆಗಳಿಂದ ಉಪಯೋಗ ಏನು?. ಅನೇಕ ಬಲಿಷ್ಠರು ರಾಜಕಾಲುವೆ, ಉಪಕಾಲುವೆ ಮುಚ್ಚಿ ಅರಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆರೆಗಳನ್ನು ನುಂಗಿ ಹಾಕಿದ್ದಾರೆ. ಈ ರೀತಿ ಜಲಾವೃತ ಆಗಲು ಇಂತಹ ದುರಾಸೆ ಕಾರಣ ಎಂದು ಕಿಡಿಕಾರಿದರು.
ಟ್ವೀಟ್ನಿಂದ ಪ್ರಯೋಜನ ಇಲ್ಲ: ಉದ್ಯಮಿ ಮೋಹನ್ ದಾಸ್ ಪೈ ಅವರು ಬೆಂಗಳೂರು ಉಳಿಸಿ ಎಂದು ಪ್ರಧಾನಿಗಳಿಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದರೆ ಬೆಂಗಳೂರಿಗೆ ಪರಿಹಾರ ಸಿಗಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವ ಪಕ್ಷದ ಕೊಡುಗೆ ಎಷ್ಟಿದೆ ಅನ್ನೋದು ತಿಳಿಯಬೇಕು. ಬೆಂಗಳೂರು ರಕ್ಷಣೆ ಮಾಡುವ ಕೆಲಸ ಪ್ರಧಾನಿ ಕೈಯಲ್ಲಿಲ್ಲ. ಆ ರೀತಿ ಭಾವಿಸಿದರೆ ಅವರಿಗೆ ನಿರಾಸೆಯಾಗೋದು ಖಚಿತ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೆಚ್ಡಿಕೆ ಮಾರ್ಮಿಕವಾಗಿ ನುಡಿದರು.