ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಭಾಗಿಯಾದ ಕಾರ್ಯಕ್ರಮ ಆಯೋಜಕ ವಿರೇನ್ ಖನ್ನಾ ಜೊತೆ ಸೇರಿ ಸದ್ಯ ಪೊಲೀಸ್ ವಶದಲ್ಲಿರುವ ಟೆಕ್ಕಿ ಆದಿತ್ಯ ಅಗರ್ವಾಲ್ ಸದ್ಯ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಹೇಳಲಾಗ್ತಿದೆ.
ನಟಿ ರಾಗಿಣಿ ಜೊತೆ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಆದಿತ್ಯ ಅಗರ್ವಾಲ್, ವೃತ್ತಿಯಲ್ಲಿ ಖ್ಯಾತ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ. ವಿದೇಶಗಳಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದ ಅಗರ್ವಾಲ್ಗೆ ವರ್ಷಕ್ಕೆ 48 ಲಕ್ಷ ರೂ.ಪ್ಯಾಕೇಜ್ ಬರುತ್ತಿತ್ತಂತೆ. ಆದರೆ ಪಾರ್ಟಿಗೆ ತೆರಳುವಾಗ ಡ್ರಗ್ಸ್ ಕಿಂಗ್ಪಿನ್ ವಿರೇನ್ ಸಹವಾಸಕ್ಕೆ ಬಿದ್ದು ಡ್ರಗ್ಸ್ ಮೇಲಿನ ವ್ಯಾಮೋಹಕ್ಕೆ ವಿದೇಶದಲ್ಲಿನ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ವಾಸವಾಗಿದ್ದ.
ಆತನ ಫ್ಲಾಟ್ ಬಾಡಿಗೆಯೇ ತಿಂಗಳಿಗೆ 42 ಸಾವಿರ ರೂಪಾಯಿ. ಅಷ್ಟೇ ಅಲ್ಲ, ಅಗರ್ವಾಲ್ ಹೋಟೆಲ್ಗಳಲ್ಲಿ ವೇಟರ್ಸ್ಗೆ ಸಾವಿರಾರು ರೂಪಾಯಿ ಟಿಪ್ಸ್ ಕೊಡ್ತಿದ್ದ ಅನ್ನೋದು ವಿಚಾರಣೆ ವೇಳೆ ತಿಳಿದುಬಂದಿದೆ.
ಸದ್ಯ ಸಿಸಿಬಿ ವಶದಲ್ಲಿರುವ ಅಗರ್ವಾಲ್ ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣದ ಕೆಲ ರೋಚಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ವಿರೇನ್ ಖನ್ನಾ ಸಹವಾಸ ಮಾಡಿ ಡ್ರಗ್ಸ್ ಗೀಳು ಹಚ್ಚಿಕೊಂಡು ಯುವತಿಯರ ಶೋಕಿ ಹೊಂದಿದ್ದ. ಇದರಲ್ಲಿ ಬಹುತೇಕ ಹೈ ಫೈ ನಟಿಯರು ಮಾಡೆಲ್ಗಳು ಇರುವ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.
ಆದಿತ್ಯ ಅಗರ್ವಾಲ್ ವೃತ್ತಿಯಲ್ಲಿ ಟಾಪ್ ಮೋಸ್ಟ್ ಸಾಫ್ಟ್ವೇರ್ ಎಂನಿಯರ್ ಆಗಿರುವ ಕಾರಣ ಸಿಸಿಬಿ ಅಧಿಕಾರಿಗಳು ಆತ ಮಾಡಿದ ತಪ್ಪಿನ ಬಗ್ಗೆ ಬುದ್ಧಿ ಹೇಳಿದ್ದಾರೆ. ಸದ್ಯ ಅಗರ್ವಾಲ್ ಸೂಚಿಸಿದ ಕೆಲ ಪೆಡ್ಲರ್ಗಳಿಗೆ ನೋಟಿಸ್ ಕೊಡಲು ಸಿಸಿಬಿ ಮುಂದಾಗಿದೆ.