ಬೆಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಾಕಿ ಇರುವ ರೈತ ಫಲಾನುಭವಿಗಳು ಇ ಕೆವೈಸಿ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂ. ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಈ ಅನುದಾನವನ್ನು 2,000 ರೂ. ಗಳಂತೆ ವಾರ್ಷಿಕ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯ ರೈತ ಕುಟುಂಬಗಳಿಗೆ ಹೆಚ್ಚುವರಿಯಾಗಿ 2 ಕಂತುಗಳಲ್ಲಿ ವರ್ಷಕ್ಕೆ 4,000 ರೂ. ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಯೋಜನೆಯ ಆರ್ಥಿಕ ನೆರವು ಪಡೆಯಲು ರೈತ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ ಈವರೆಗೆ 21,448 ರೈತರು, ಶೇ.67 ರಷ್ಟು (ಆನೇಕಲ್ ಶೇ.71, ಬೆಂ.ದಕ್ಷಿಣ ಶೇ.74, ಬೆಂ.ಉತ್ತರ ಶೇ.63, ಬೆಂ.ಪೂರ್ವ ಶೇ.53 ಮತ್ತು ಯಲಹಂಕ ಶೇ.54) ರೈತರು ಇ-ಕೆವೈಸಿ ಮಾಡಿಸಿದ್ದು, ಇನ್ನೂ 10,415 ಫಲಾನುಭವಿ ರೈತರು ಶೇ.33 ರಷ್ಟು (ಆನೇಕಲ್ ಶೇ.29, ಬೆಂ.ದಕ್ಷಿಣ ಶೇ.26, ಬೆಂ.ಉತ್ತರ ಶೇ.37, ಬೆಂ.ಪೂರ್ವ ಶೇ.47 ಮತ್ತು ಯಲಹಂಕ ಶೇ.46) ಬಾಕಿ ಇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಓಟಿಪಿ ಆಧಾರಿತ ಇ ಕೆವೈಸಿಗೆ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಫಲಾನುಭವಿಗಳು ಸ್ವತಃ ತಾವೇ ಅಥವಾ ಇತರರ ಸಹಾಯ ಪಡೆದು http://exlink/pmkisan.gov.in/aadharekyc.aspx ಲಿಂಕ್ ನಲ್ಲಿ ಆಧಾರ್ ಸಂಖ್ಯೆ ಮತ್ತು ಓಟಿಪಿ ಯನ್ನು ನಮೂದಿಸಿ ಇ ಕೆವೈಸಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.