ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಅಲ್ಲದೆ, ಆರೋಪ ಸಂಬಂಧ ಈವರೆಗೂ ನಡೆದಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ. ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಶ್ರೀನಿವಾಸ್ ಪರ ವಾದ ಮಂಡಿಸಿದ ವಕೀಲರು, ಅರ್ಜಿಯ ಅಂತಿಮ ಆದೇಶದವರೆಗೂ ಶ್ರೀನಿವಾಸ್ ಅವರ ಹುದ್ದೆಗೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡಬಾರದಾಗಿತ್ತು. ಆದರೆ, ಈಗಾಗಲೇ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಅಲ್ಲದೆ, ಚುನಾವಣಾ ಕಾರ್ಯಗಳಿಗಾಗಿ ನೇಮಕ ಮಾಡಿರುವ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿ ಮಾಡದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.