ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಜನಪ್ರಿಯ ಉದ್ಯಾನವನ ಕಬ್ಬನ್ ಪಾರ್ಕ್ನಲ್ಲಿ 2022ರ ಡಿಸೆಂಬರ್ನಲ್ಲಿ ಪ್ರಾರಂಭವಾದ ಕಬ್ಬನ್ ರೀಡ್ಸ್ ಪ್ರತಿ ಶನಿವಾರ ಅನೇಕ ಓದುಗ ಉತ್ಸಾಹಿಗಳ ನೆಚ್ಚಿನ ನೆಲೆಯಾಗಿ ಮಾರ್ಪಾಡಾಗಿದೆ. ಇದೀಗ ಕಬ್ಬನ್ ರೈಟ್ಸ್, ಕಬ್ಬನ್ ಪೇಂಟ್ಸ್ ಮತ್ತು ಕಬ್ಬನ್ ಫೋಲ್ಡ್ಸ್‌ನಿಂದಾಗಿ ಇನ್ನೂ ಹೆಚ್ಚು ಸೃಜನಶೀಲ ಚಟುವಟಿಕೆಗಳ ತಾಣವಾಗಿ ರೂಪುಗೊಳ್ಳುತ್ತಿದೆ.
ಹೊಸ ವಿಸ್ತರಣೆಯ ಕುರಿತು ಮಾತನಾಡಿರುವ ಕಬ್ಬನ್ ರೀಡ್ಸ್ ಸಹ-ಸಂಸ್ಥಾಪಕಿ ಶ್ರುತಿ ಸಾಹ್, "ಕಲಾವಿದರು, ಬರಹಗಾರರು ಮತ್ತು ಧ್ಯಾನಾಸಕ್ತರು ಹೆಚ್ಚು ಇಷ್ಟಪಡುವ ರೀತಿಯಲ್ಲಿ ಅಭಿಯಾನ ಮುನ್ನಡೆಸುತ್ತಿದ್ದೇವೆ. ಪಾರ್ಕ್ನಲ್ಲಿ ಪ್ರತಿ ಶನಿವಾರ ಸುಮಾರು 600ರಿಂದ 700 ಜನರು ಸೇರುತ್ತಾರೆ" ಎಂದು ಹೇಳಿದರು.
ಏನಿದು ಕಬ್ಬನ್ ರೈಟ್ಸ್? : "ರೀಡ್ಸ್‌ನಲ್ಲಿರುವ ಮೂರು ಹೊಸ ಸಮುದಾಯಗಳಲ್ಲಿ, ಕಬ್ಬನ್ ರೈಟ್ಸ್ ಜುಲೈ 15ರಂದು ಒಂಬತ್ತು ಬರಹಗಾರರೊಂದಿಗೆ ಪ್ರಾರಂಭವಾಗಿದೆ. ಬರಹಗಾರರು ತಮ್ಮ ಆಲೋಚನೆಗಳನ್ನು ಮೌನವಾಗಿ ಕುಳಿತು ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಭಾವದಿಂದ ಬರೆಯುವ ಅವಕಾಶವಿದು. ಪತ್ರ, ಕವನ, ಕಥೆ, ಗದ್ಯ, ಜರ್ನಲ್ ಅಥವಾ ಸಂಶೋಧನೆ ಕುರಿತು ಬರೆಯಬಹುದು. ಕಾಗದ, ಲ್ಯಾಪ್‌ಟಾಪ್ ಅಥವಾ ಐಪ್ಯಾಡ್‌ಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ" ಎಂದು ಕಬ್ಬನ್ ರೈಟ್ಸ್ ಸಹ-ಸಂಸ್ಥಾಪಕಿ ಪಾರ್ವತಿ ತಿಳಿಸಿದರು.
ಕಬ್ಬನ್ ಫೋಲ್ಡ್ಸ್ ಅಂದ್ರೆ..: ಕಬ್ಬನ್ ಫೋಲ್ಡ್ಸ್ ಜುಲೈ 8ರಿಂದ ಶುರುವಾಗಿದೆ. ಇದರ ಸಹ-ಸಂಸ್ಥಾಪಕರಾಗಿ ಎಂಜಿನಿಯರ್ ಶಶಿಕಿರಣ್ ರಾಜಶೇಖರ್ ಮತ್ತು ಪ್ರಾಧ್ಯಾಪಕ ತ್ಯಾಗರಾಜನ್ ಒರಿಗಮಿ ಜಗತ್ತನ್ನು ಉದ್ಯಾನವನಕ್ಕೆ ತಂದಿದ್ದಾರೆ. ಶನಿವಾರ ಬೆಳಗಿನಿಂದ ಮಧ್ಯಾಹ್ನ 1 ಗಂಟೆಯವರಿಗೆ ಓದುಗರಿಗಾಗಿ ಬಣ್ಣಬಣ್ಣದ ಕಾಗದ ಬಳಸಿ ಬುಕ್‌ಮಾರ್ಕ್‌ಗಳನ್ನು ಮಾಡಿಕೊಡಲಾಗುತ್ತದೆ.