ಬೆಂಗಳೂರು :ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳು ಮತ್ತು ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಿಸುವಾಗ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲಿ ಮಾಡಿರುವುದು ಬಯಲಾಗಿದ್ದು, ನಿಗಮದ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ.ರಮ್ಯಾ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಾಜಿನಗರ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳು ಹಾಗೂ ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಣ, ಬಿಟಿಎಂ ಲೇಔಟ್ ಹಾಗೂ ವಿಜಯನಗರದ ಟಿಟಿಎಂಸಿ ಜಾಗದಲ್ಲಿ ಹೆಚ್ಚುವರಿ ಹಂಚಿಕೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀರಾಮ್ ಮುಲ್ಕಾವಾನ್ ಮತ್ತು ಇತರ ಸಿಬ್ಬಂದಿ ಸೇರಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳ ಸಹಿ ನಕಲು ಮಾಡಿ ನವೀಕರಣದ ಹಣವನ್ನು ತಮ್ಮ ಕಿಸೆಗೆ ಇಳಿಸಿರುವುದು ಪತ್ತೆಯಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ. ರಮ್ಯಾ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಎರಡು ಪ್ರಕರಣಗಳು:46ನೇ ಸಿಸಿಎಚ್ ನ್ಯಾಯಾಲಯ ಇಂದು ಪತ್ನಿಯನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯ ಮದುವೆಯ ಸಂದರ್ಭದಲ್ಲಿ ನೀಡಿದ್ದ ದುಬಾರಿ ಉಡೆಗೊರೆಯನ್ನು ಕಳ್ಳತನ ಮಾಡಿರು ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತ್ನಿಯನ್ನ ಹತ್ಯೆ ಮಾಡಿ ಸಾಕ್ಷ್ಯನಾಶಪಡಿಸಿದ್ದ ಆರೋಪಿಗೆ ಸಜೆ:ಪತ್ನಿಯನ್ನು ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಜೊತೆಗೆ 7 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ ದಂಡ ವಿಧಿಸಿ ಇಂದು 46ನೇ ಸಿಸಿಎಚ್ ನ್ಯಾಯಾಲಯ ಆದೇಶಿಸಿದೆ. ಕೈಲಾಸ್ ಚಂದ್ ಬೆಹರ್(45) ಶಿಕ್ಷೆಗೊಳಗಾದ ಅಪರಾಧಿ. 2014ರ ಜೂನ್ 19ರಂದು ಪತ್ನಿ ಮಾಲತಿ ಸಾಹು ಎಂಬಾಕೆಯನ್ನು ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
6 ವರ್ಷಗಳ ಹಿಂದೆ ಮಾಲತಿ ಸಾಹು ಎಂಬಾಕೆಯನ್ನ ವಿವಾಹವಾಗಿದ್ದ ಉತ್ತರ ಭಾರತ ಮೂಲದ ಕೈಲಾಶ್ ಚಂದ್ ಬೆಹರ್ ಕಾಮಾಕ್ಷಿಪಾಳ್ಯದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಮಾಲತಿ ಸಾಹು ತನ್ನ ಅಕ್ಕ ಮತ್ತು ಸಹೋದರನ ಜತೆ ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಈಕೆ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೈಲಾಶ್ ಚಂದ್ ಅನುಮಾನಗೊಂಡಿದ್ದ.