ಬೆಂಗಳೂರು: ರೌಡಿಶೀಟರ್ವೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಿನ್ನೆ ಸಂಜೆ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿಮಾರ್ಟ್ ಕಟ್ಟಡದ ಬಳಿ ನಡೆದಿದೆ. ಕಪಿಲ್ ಎಂಬಾತ ಹತ್ಯೆಯಾದ ರೌಡಿಶೀಟರ್. ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಕೈಗೊಂಡಿದ್ದಾರೆ.
ವಿವರ: ಕಪಿಲ್ 2014ರ ಅಕ್ಟೋಬರ್ನಲ್ಲಿ ಬಿಟಿಎಂ ಲೇಔಟ್ನ ಜೈ ಭೀಮ್ ನಗರದ ಬಳಿ ನಡೆದಿದ್ದ ನಕ್ರಾ ಬಾಬುವಿನ ಕೊಲೆ ಕೇಸ್ನಲ್ಲಿ ಆರೋಪಿ. ಸ್ನೇಹಿತ ರಾಜ್ ಕಮಲ್ ನಿವಾಸದ ಸಮೀಪ ಆತನ ಕುಟುಂಬದವರ ಕಣ್ಣೆದುರೇ ಬಾಬುವಿನ ಹತ್ಯೆಯಾಗಿತ್ತು. ಅದೇ ವರ್ಷದ ಜೂನ್ ತಿಂಗಳಿನಲ್ಲಿ ಹೊಸೂರು ಚೆಕ್ ಪೋಸ್ಟ್ ಬಳಿ ನಡೆದಿದ್ದ ಕವಳ ವಿಜಯ್ ಕುಮಾರ್ನ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಕಪಿಲ್, ಶರವಣ, ವಿನಯ್, ರಂಜಿತ್, ಜೇಮ್ಸ್ ಮತ್ತು ಶ್ಯಾಮ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದರು. ಹಾಗಾಗಿ ನಿನ್ನೆ ನಡೆದ ಕೊಲೆ ಸೇಡಿನ ಕೃತ್ಯ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಜಯಪುರದಲ್ಲೂ ಇಂಥದ್ದೇ ಘಟನೆ..:ವಿಜಯಪುರ ಜಿಲ್ಲೆಯ ಆಲಮೇಲ ಸಮೀಪದ ದೇವರನಾವದಗಿ ಗ್ರಾಮದಲ್ಲಿಮಂಗಳವಾರ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್ ಹತ್ಯೆ ನಡೆದಿತ್ತು. ಮಾಳಪ್ಪ ಯಮನಪ್ಪ ಮೇತ್ರಿ (40) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ.