ಬೆಂಗಳೂರು:ಅನೈತಿಕ ಸಂಬಂಧ ತೊರೆಯಲು ಒಪ್ಪದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಂದು ಶವ ಎಸೆದು ಹೋಗಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಹಾಗೂ ಆತನ ಪತ್ನಿ ನೇಹಾ ಕುಮಾರಿ ಬಂಧಿತರು. ಸಜ್ಜನ್ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು, ಮೃತದೇಹವನ್ನು ಆರ್ಎಂಸಿ ಯಾರ್ಡ್ ಸಮೀಪದ ಸೋಮೇಶ್ವರ ನಗರದಲ್ಲಿ ಎಸೆದಿದ್ದರು.
ಬಿಹಾರ ಮೂಲದವರಾದ ಸಜ್ಜನ್ ಸಿಂಗ್, ರಾಜೇಶ್ ಕುಮಾರ್ ಹಾಗೂ ನೇಹಾ ಕುಮಾರಿ ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ನೇಹಾ ಕುಮಾರಿ ಹಾಗೂ ಸಜ್ಜನ್ ಸಿಂಗ್ ನಡುವೆ ಅನೈತಿಕ ಸಂಬಂಧವಿತ್ತು. ಈ ಸಂಬಂಧ ಬೇಡ ದೂರವಾಗೋಣ ಎಂದು ನೇಹಾಕುಮಾರಿ ಹೇಳಿದರೂ ಸಹ ಸಜ್ಜನ್ ಸಿಂಗ್ ಒಪ್ಪಿರಲಿಲ್ಲ. ಸಜ್ಜನ್ ಸಿಂಗ್ನ ಕಾಟ ತಾಳಲಾರದೆ ನೇಹಾ ಹಾಗೂ ಪತಿ ರಾಜೇಶ್ ಕುಮಾರ್ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕತ್ತು ಕುಯ್ದು ಕೊಲೆ ಮಾಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮೊದಲು ಕೊಲೆಯಾದವರನ್ನು 40 ವರ್ಷದ ಉತ್ತರ ಭಾರತ ಮೂಲದ ವ್ಯಕ್ತಿ ಎಂದು ಗುರುತಿಸಿದ್ದರು. ಮೃತ ವ್ಯಕ್ತಿ ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಪರಿಚಯಸ್ಥ ಉತ್ತರ ಭಾರತ ಮೂಲದ ಕೆಲ ಜನರೊಂದಿಗೆ ಆಗಾಗ್ಗೆ ಗಲಾಟೆಯಾಗುತ್ತಿತ್ತು. ತಡರಾತ್ರಿ ಕೂಡ ಗಲಾಟೆ ನಡೆದಿದೆ. ಈ ವೇಳೆ ಕೊಲೆ ಮಾಡಿ ಬಳಿಕ ಶವ ಎಸೆದು ಆರೋಪಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.