ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(40) ಬಂಧಿತ ಆರೋಪಿ. ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಡಾ. ಸುಧಾಮೂರ್ತಿ ಅವರು ಮುಖ್ಯ ಅತಿಥಿಯಾಗಿ ಬರಲಿದ್ದಾರೆಂದು ಸುಳ್ಳು ಪ್ರಚಾರ ಮಾಡಿ, ಕಾರ್ಯಕ್ರಮದ ಟಿಕೆಟ್‌ಗೆ ತಲಾ 40 ಡಾಲರ್ ಪಡೆದು ಜನರಿಗೆ ಆರೋಪಿ ವಂಚಿಸಿದ್ದರು. ಈ ಸಂಬಂಧ ಸುಧಾ ಮೂರ್ತಿಯವರ ಆಪ್ತ ಸಹಾಯಕಿ ಮಮತಾ ಸಂಜಯ್ ಅವರು ಲಾವಣ್ಯ ಮತ್ತು ಶೃತಿ ಎಂಬುವವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.
ಶೃತಿ ದಂಪತಿ ವಿರುದ್ಧ ದ್ವೇಷ:ಆರೋಪಿ ಅರುಣ್ ಸುದರ್ಶನ್ ಹಾಗೂ ಅಮೆರಿಕದಲ್ಲಿ ವಾಸವಾಗಿರುವ ಶೃತಿಯ ಪತಿ ಸಂಬಂಧಿಗಳಾಗಿದ್ದು, ಕಾರಣಾಂತರಗಳಿಂದ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದರು. ಅಮೆರಿಕದಲ್ಲಿದ್ದ ಶೃತಿ ದಂಪತಿ ಕಳೆದ 10 ವರ್ಷಗಳಿಂದ ಅರುಣ್ ಜೊತೆ ಸಂಪರ್ಕ ಕಳೆದುಕೊಂಡಿದ್ದರು. ಹೀಗಾಗಿ ಅರುಣ್, ಶೃತಿ ದಂಪತಿ ವಿರುದ್ಧ ದ್ವೇಷ ಸಾಧಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ (KKNC) ಅಮೆರಿಕದಲ್ಲಿ ಸೆ.26ರಂದು ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ. ಸುಧಾಮೂರ್ತಿ ಎಂಬ ಕಾರ್ಯಕ್ರಮ ಆಯೋಜಿಸಲು ಯೋಚಿಸಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿದ್ದ ಸಂಬಂಧಿ ಅರುಣ್‌ಗೆ ಕರೆ ಮಾಡಿ ಶೃತಿ ಮಾಹಿತಿ ನೀಡಿದ್ದರು. ಜೊತೆಗೆ ಈ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿಯಾಗಿಸಲು ಸಾಧ್ಯವೇ ಎಂದು ಅರುಣ್‌ಗೆ ಶೃತಿ ಕೇಳಿದ್ದರು. ಇದಕ್ಕೆ ಒಪ್ಪಿದ ಅರುಣ್, ಶೃತಿ ದಂಪತಿ ಗೌರವಕ್ಕೆ ಚ್ಯುತಿ ತರಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.