ಬೆಂಗಳೂರು: ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಮುರುಘಾ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಯವರಿಗೆ ಎಸಿಎಂಎಂ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಶಿವಮೂರ್ತಿ ಸ್ವಾಮೀಜಿಯವರು ಈಗ ಜಮೀನು ಮಾರಾಟಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುರುಘಾ ಶ್ರೀ ವಿರುದ್ಧ ಬಂಧನ ವಾರೆಂಟ್:ಚಿತ್ರದುರ್ಗ ಮಠದ ಆಸ್ತಿ ಮಾರಾಟ ಬಗ್ಗೆ ತುಮಕೂರಿನ ಪಿ.ಎಸ್.ಪ್ರಕಾಶ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ದೂರುದಾರರಿಂದ ಹೇಳಿಕೆ ದಾಖಲಿಸಿಕೊಂಡಿದೆ. ಆರೋಪಿಯಾಗಿರುವ ಶಿವಮೂರ್ತಿ ಶರಣರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಆನಂದ್ ಕುಮಾರ್ ಅವರಿಗೆ ಜಾಮೀನು ರಹಿತ ವಾರೆಂಟ್ ಮರು ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಸ್ವಾಮೀಜಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಅರ್ಜಿದಾರರು, ಬಹಳಷ್ಟು ಮೌಲ್ಯದ ಜಮೀನನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಿ ಮಠಕ್ಕೆ ಕೊಟ್ಯಂತರ ರೂ.ಗಳ ನಷ್ಟ ಉಂಟು ಮಾಡಲಾಗಿದೆ. ಭಕ್ತರಿಗೆ ನಂಬಿಕೆ ದ್ರೋಹ ಸಹ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು...?ಚಿತ್ರದುರ್ಗ ಮುರುಘರಾಜೇಂದ್ರ ಮಠಕ್ಕೆ ಸೇರಿದ ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಸರ್ವೇ ನಂ 34 ರಲ್ಲಿ 7 ಎಕರೆ 18 ಗುಂಟೆ ಜಮೀನಿತ್ತು. ಈ ಜಮೀನನ್ನು ಶಿವಮೂರ್ತಿ ಮುರುಘಾ ಶರಣರು ಆನಂದ್ ಕುಮಾರ್ ಎಂಬುವರಿಗೆ ಮಠದ ನಿಯಮಾವಳಿಗಳಿಗೆ ವಿರುದ್ಧವಾಗಿ ಮಾರಾಟ ಮಾಡಿದ್ದಾರೆ ಎಂದು ಪಿ.ಎಸ್.ಪ್ರಕಾಶ್ ದೂರು ದಾಖಲಿಸಿದ್ದರು.