ಬೆಂಗಳೂರು: ಬೆಂಗಳೂರಿನ ಘಟಾನುಘಟಿ ಕೈ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು. ಸುಮಾರು 11 ಕೈ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಕೈ ನಾಯಕರ ಪೈಕಿ ಶಾಂತಿನಗರದ ಎನ್.ಎ. ಹ್ಯಾರೀಸ್ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
438 ಕೋಟಿ ರೂ. ಆಸ್ತಿ ಒಡೆಯ ಎನ್.ಎ. ಹ್ಯಾರೀಸ್:ಶಾಂತಿನಗರದ ಕೈ ಅಭ್ಯರ್ಥಿ ಎನ್.ಎ. ಹ್ಯಾರೀಸ್ ಬೆಂಗಳೂರು ಕೈ ಹುರಿಯಾಳುಗಳ ಪೈಕಿ ಅಗರ್ಭ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎನ್.ಎ. ಹ್ಯಾರೀಸ್ ಹಾಗೂ ಕುಟುಂಬದವರ ಬಳಿ 438.22 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳಿವೆ. ಇಷ್ಟು ಪ್ರಮಾಣದ ಆಸ್ತಿಯನ್ನು ಹೊಂದಿದ್ದರೂ ಹ್ಯಾರೀಸ್ ಮತ್ತು ಪತ್ನಿ ಹೆಸರಲ್ಲಿ ಯಾವುದೇ ವಾಹನವಿಲ್ಲ. ಹ್ಯಾರೀಸ್ ಮತ್ತು ಪತ್ನಿ 167.18 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆ ಪೈಕಿ 115.58 ಕೋಟಿ ರೂ. ಗಳನ್ನು ವಿವಿಧ ಸಂಸ್ಥೆ ಹಾಗೂ ವ್ಯಕ್ತಿಳಿಗೆ ಸಾಲ ನೀಡಿದ್ದಾಗಿದೆ. ಮಗಳಿಗೆ 1.35 ಕೋಟಿ ರೂ., ಮಗನಿಗೆ 1.17 ಕೋಟಿ ರೂ. ಸಾಲ ನೀಡಿದ್ದಾರೆ. ಒಟ್ಟು 271.02 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 28.29 ಕೋಟಿ ರೂ. ಸಾಲ ಪಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಿಗೇ ಸಾಲ ನೀಡಿದ ಕೈ ಅಭ್ಯರ್ಥಿ:ಯಲಹಂಕ ಕ್ಷೇತ್ರದ ಕೈ ಅಭ್ಯರ್ಥಿ ಕೇಶವ ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ 1 ಕೋಟಿ ರೂ. ಸಾಲ ನೀಡಿರುವುದಾಗಿ ತಮ್ಮ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಬಳಿ 10.92 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 100.58 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕೇಶವ ರಾಜಣ್ಣ ಒಟ್ಟು 13.95 ಕೋಟಿ ರೂ. ಸಾಲ ಪಡೆದಿದ್ದಾರೆ. 13 ವಾಹನಗಳಿದ್ದು, ಆ ಪೈಕಿ 10 ಕಾರುಗಳಿವೆ.
ಕುಸುಮಾ ಆಸ್ತಿ ವಿವರ:ರಾಜರಾಜೇಶ್ವರಿ ನಗರ ಕೈ ಅಭ್ಯರ್ಥಿ ಕುಸುಮಾ ಆಸ್ತಿ ಮೌಲ್ಯ 4.77 ಕೋಟಿ ರೂ. ಆಗಿದೆ. ಈ ಪೈಕಿ 28 ಲಕ್ಷ ರೂ. ಚರಾಸ್ತಿ, 1.97 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ತಂದೆ ಹನುಮಂತರಾಯಪ್ಪ ಅವರಿಗೆ 1.25 ಕೋಟಿ ಸಾಲ ನೀಡಿದ್ದಾರೆ. ಕುಸುಮಾ ಹೆಸರಲ್ಲಿ ಯಾವುದೇ ವಾಹನವಿಲ್ಲ. 1.22 ಕೋಟಿ ರೂ. ಸಾಲ ಹೊಂದಿದ್ದಾರೆ.