ಬೆಂಗಳೂರು: ನಕಲಿ ಭದ್ರತೆ ನೀಡಿರುವ ಕೆ.ಜಿ.ನಾಗಭೂಷಣ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೋಣನಗುಂಟೆ ಗ್ರಾಮದ ಕೆ.ಜಿ.ನಾಗಭೂಷಣ್ ಅವರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೂರು ನೀಡಲಾಗಿದೆ. ಭಯೋತ್ಪಾದನಾ ಆರೋಪದಲ್ಲಿ ಬಂಧಿಯಾಗಿರುವ ಕೋಲಾರದ ರಹಮತ್ ನಗರದ ನಿವಾಸಿ ಸಲೀಂ ಖಾನ್ ಎಂಬುವರಿಗೆ ಕರ್ನಾಟಕ ಹೈಕೋರ್ಟ್ 2 ಲಕ್ಷ ರೂಪಾಯಿ ಮೌಲ್ಯದ ಭದ್ರತೆ ಒಳಗೊಂಡು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಷರತ್ತುಗಳ ಭಾಗವಾಗಿ ಸಲೀಂ ಖಾನ್ ಪರವಾಗಿ ನಾಗಭೂಷಣ್ ಅವರು ಭದ್ರತೆ ನೀಡಿದ್ದರು. 10 ಲಕ್ಷ ರೂಪಾಯಿ ಬೆಲೆ ಬಾಳುವ ಸರ್ವೇ ನಂ. 158/3ರಲ್ಲಿ 13 ಗುಂಟೆ ಜಮೀನನ್ನು ಭದ್ರತೆಯಾಗಿ ನೀಡಿದ್ದರು.