ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ 17ನೇ ಚಿತ್ರಸಂತೆಗೆ ಆಗಮಿಸಿದ್ದ ಸುಮಾರು 3 ಲಕ್ಷ ಕಲಾಭಿಮಾನಿಗಳು ಕಲೆಗೆ ಮನಸೋತು ಬಹುಪರಾಕ್ ಎಂದಿದ್ದಾರೆ.
ಒಂದೇ ದಿನದಲ್ಲಿ 3 ಕೋಟಿ ಸಂಪಾದಿಸಿದ ಬೆಂಗಳೂರು ಚಿತ್ರಸಂತೆ ವರ್ಷಕ್ಕೊಮ್ಮೆ ನಡೆಯುವ ಚಿತ್ರಸಂತೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ 1500ಕ್ಕಿಂತ ಹೆಚ್ಚು ಕಲಾಭಿಮಾನಿಗಳು ಆಗಮಿಸಿ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿವಿಧ ಮಾದರಿಯ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಕಲಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದರು ಎಂದರೆ ಅತಿಶಯೋಕ್ತಿಯಾಗದು.
ಕುಮಾರಕೃಪ ರಸ್ತೆಯ ಇಕ್ಕೆಲ್ಲಗಳಲ್ಲಿ ಇರಿಸಿದ್ದ ಕಲಾಕೃತಿಗಳ ನೋಡಲು ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾಭಿಮಾನಿಗಳು ಆಗಮಿಸಿದ್ದರು. ಅಲ್ಲಿ ಸಾವಿರ ರೂಪಾಯಿಯಿಂದ 12 ಲಕ್ಷ ರೂಪಾಯಿ ಬೆಲೆಬಾಳುವ ಕಲಾಕೃತಿಗಳೂ ಇದ್ದವು. ಕಲಾಭಿಮಾನಿಗಳು ತಮಗಿಷ್ಟವಾದ ಚಿತ್ರಕಲೆ, ಕಲಾಕೃತಿಗಳನ್ನ ಕೊಂಡುಕೊಳ್ಳುವುದು ಸಾಮಾನ್ಯವಾಗಿತ್ತು. ಇನ್ನು ಒಂದೇ ದಿನದಲ್ಲಿ 3 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ವಿ.ಶಂಕರ್ ತಿಳಿಸಿದ್ದಾರೆ.
ಚಿತ್ರಸಂತೆಗೆ ಮಕ್ಕಳು, ಹಿರಿಕರು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದವರು ಆಗಮಿಸಿ ಪ್ರದರ್ಶನವನ್ನು ಯಶಸ್ವಿಯನ್ನಾಗಿಸಿದರು.