ಬೆಂಗಳೂರು: ಮಾನಸಿಕ ಒತ್ತಡ ತಗ್ಗಿಸಿಕೊಳ್ಳಲು ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡಾರ್ಕ್ ವೆಬ್ ಮುಖಾಂತರ ಯುರೋಪ್ ರಾಷ್ಟ್ರಗಳಿಂದ ಹೈಡ್ರೋ ಗಾಂಜಾ ತರಿಸಿ, ಬಿಡದಿಯ ಈಗಲ್ ಟನ್ ವಿಲ್ಲಾದ ಮನೆಯೊಂದರಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರು ಇರಾನ್ ಪ್ರಜೆ ಸೇರಿದಂತೆ ನಾಲ್ವರು ದಂಧೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಮಾಹಿತಿ ಕಾಲೇಜು ವಿದ್ಯಾರ್ಥಿ, ಟೆಕ್ಕಿಗಳು ಸೇರಿದಂತೆ ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಡಿಜೆಹಳ್ಳಿ ಠಾಣಾ ವ್ಯಾಪ್ತಿಯ ಕಾವೇರಿ ನಗರದಲ್ಲಿ ಬಿಳಿ ಬಣ್ಣದ ಸ್ಕೋಡಾ ಕಾರಿನಲ್ಲಿ ನಾಲ್ವರು ದಂಧೆಕೋರರು ಎಲ್ಎಸ್ಡಿ ಪೇಪರ್ಸ್ ಹಾಗೂ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿಯ ಪೊಲೀಸರಿಗೆ ಮಾಹಿತಿ ಬಂದಿತ್ತು.
ಇದನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಇರಾನ್ ಮೂಲದ ಜಾವೀದ್ ರುಸ್ತುಂಪುರ್, ಬಾಬಕ್ ಶೀರ್ ಮೊಹಮ್ಮದಿ ಹಾಗೂ ಸ್ಥಳೀಯರಾದ ಮೋಹಿನ್ ಖಾನ್ ಹಾಗೂ ಮೌಸಿನ್ ಜಮೀನ್ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಒಂದು ಗ್ರಾಂಗೆ 4-ರಿಂದ 5 ಸಾವಿರ ಮಾರಾಟ ಮಾಡುತ್ತಿದ್ದರು. ಇದರ ಮೂಲ ಕೆದಕಿ ಹೊರಟ ಪೊಲೀಸರಿಗೆ ಬಿಡದಿ ಬಳಿಯ ಈಗಲ್ ಟನ್ ವಿಲ್ಲಾವೊಂದರ ಬಾಡಿಗೆ ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಮನೆಯಲ್ಲಿ ಹೈಡ್ರೊ ಗಾಂಜಾ ಬೆಳೆಯುತ್ತಿದ್ದ ಇರಾನಿಗ :2010ರಲ್ಲಿ ಭಾರತಕ್ಕೆ ಸ್ಟೂಡೆಂಟ್ ವೀಸಾದಡಿ ಆರೋಪಿ ರುಸ್ತುಂಪುರ್ ಬಂದಿದ್ದ. ಕಮ್ಮನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಬಾಣಸವಾಡಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಎಂಬಿಎಂ ವ್ಯಾಸಂಗ ಮಾಡುತ್ತಿದ್ದ.
ಮುಂಗೋಪ ಪ್ರವೃತ್ತಿಯೊಂದಿದ್ದ ಈತ ಮಾನಸಿಕ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ವಿವಿಧ ಔಷಧಿಗಳ ಮೊರೆ ಹೋಗಿದ್ದ. ಇದಕ್ಕಾಗಿ ಎರಡು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿದ್ದ. ಹೈಡ್ರೋ ಗಾಂಜಾ ಸೇವನೆ ಮಾಡಿದರೆ ಒತ್ತಡ ತಗ್ಗಿಸಬಹುದು ಎಂದು ಅರಿತಿದ್ದ. ಅಮೆಜಾನ್ ಸೇರಿದಂತೆ ಆನ್ಲೈನ್ ಮುಖಾಂತರ ಸರ್ಚ್ ಮಾಡಿ ಯುರೋಪ್ನ ನೆದರ್ಲ್ಯಾಂಡ್ನಿಂದ ಡಾರ್ಕ್ ವೆಬ್ಸೈಟ್ ಮುಖಾಂತರ ಹೈಡ್ರೊ ಗಾಂಜಾ ತರಿಸಿಕೊಂಡಿದ್ದ.
ಮತ್ತೊಂದೆಡೆ ಸ್ಯಾಂಡಲ್ವುಡ್ ಡ್ರಗ್ ಕೇಸ್ ಸೇರಿದಂತೆ ಸೆಲೆಬ್ರೆಟಿ ಡ್ರಗ್ಸ್ ಕೇಸ್ಗಳ ವಿರುದ್ಧ ಸಿಸಿಬಿ ಪೊಲೀಸರು ಸಮರ ಸಾರಿದ ಬೆನ್ನಲೇ ನಗರದಲ್ಲಿ ಡ್ರಗ್ಸ್ ದಂಧೆ ನಡೆಸಿದರೆ ಉಳಿಗಾಲವಿಲ್ಲ ಎಂದು ಅರಿತ ಆರೋಪಿ ರುಸ್ತುಂಪುರ್ ಕಳೆದ ಒಂದೂವರೆ ವರ್ಷದಿಂದ ಈಗಲ್ ಟನ್ ವಿಲೇಜ್ ಆರ್ಮಿ ಅಧಿಕಾರಿಗೆ ಸೇರಿದ ವಿಲ್ಲಾದ ಮನೆ ಬಾಡಿಗೆ ಪಡೆದಿದ್ದ.
ಡಾರ್ಕ್ ವೆಬ್ ಮುಖಾಂತರ ತರಿಸಿಕೊಂಡಿದ್ದ ಹೈಡ್ರೋ ಗಾಂಜಾಗಳನ್ನು ಮನೆಯೊಳಗೆ ಬೆಳೆಯಲು ಮುಂದಾಗಿದ್ದ. ಇದರಂತೆ ಬೇಕಾದ ಪರಿಕರಗಳನ್ನು ವಿದೇಶಗಳಿಂದ ತರಿಸಿಕೊಂಡಿದ್ದ. ಸೂರ್ಯನ ಶಾಖ ಹೆಚ್ಚಾಗದಂತೆ ಹೈಡ್ರೊ ಗಾಂಜಾ ಬೆಳೆಯಬೇಕಾದ ವಾತಾವರಣವನ್ನು ಸೇರಿ ಎಲ್ಲವನ್ನೂ ಸೃಷ್ಟಿ ಮಾಡಿದ್ದ.
ಬಳಿಕ ಗಾಂಜಾ ಸೊಪ್ಪನ್ನು ಒಣಗಿಸಿ ಡಬ್ಬಿಯಲ್ಲಿ ಸಂಗ್ರಹಿಸಿದ್ದ. ಬಳಿಕ ಚಿಕ್ಕ ಚಿಕ್ಕ ಪೊಟ್ಟಣಗಳ ಮುಖಾಂತರ ಒಂದು ಗ್ರಾಂ 4-5 ಸಾವಿರ ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ :ಎಂಬಿಎ ವ್ಯಾಸಂಗ ಮಾಡಲು ಭಾರತಕ್ಕೆ ಬಂದಿದ್ದ ರುಸ್ತುಂಪುರ್, ಹಿಂದೂ ಧರ್ಮದತ್ತ ಒಲವು ತೋರಿದ್ದ. ಇರಾನ್ನಲ್ಲಿ ಪಾರ್ಸಿ ಧರ್ಮದವನಾಗಿದ್ದ ಈತ, ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಶಿವನ ಆರಾಧನಕನಾಗಿದ್ದ. ಆದರೆ, ಇತ್ತ ಹೈಡ್ರೊ ಗಾಂಜಾ ಮುಖಾಂತರ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ.
ಸದ್ಯ ಬಂಧಿತ ಆರೋಪಿಗಳಿಂದ ಒಂದು ಕೋಟಿ ಮೌಲ್ಯದ ಹೈಡ್ರೊ ಗಾಂಜಾ, 130 ಗಾಂಜಾ ಗಿಡಗಳು, ಎಲ್ಎಸ್ಡಿ ಪೇಪರ್ಸ್ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಸ್ಕೋಡಾ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.