ಬೆಂಗಳೂರು: ಪ್ರೊ ಕಬಡ್ಡಿ ಸೀಸನ್ 10ರಲ್ಲಿ ಎರಡು ಮ್ಯಾಚ್ ಸೋತಿದ್ದೇವೆ. ಮುಂದಿನ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವಿದೆ. ಬೆಂಗಳೂರಿನ ಫ್ಯಾನ್ಸ್, ಹೋಮ್ ಗ್ರೌಂಡ್ ಸಪೋರ್ಟ್ ಮೂಲಕ ಗೆಲುವು ದಾಖಲಿಸಲಿದ್ದೇವೆ ಎಂದು ತಂಡದ ಕೋಚ್ ರಣದೀಪ್ ಸಿಂಗ್ ಶೆರಾವತ್ ವಿಶ್ವಾಸ ವ್ಯಕ್ತಪಡಿಸಿದರು.
ಒತ್ತಡವನ್ನು ಅಭಿಮಾನಿಗಳೇ ನಿಭಾಯಿಸುತ್ತಾರೆ:2023ನೇ ಆವೃತ್ತಿಯಲ್ಲಿನ ಪಂದ್ಯಾವಳಿಗಳು ನಗರದಲ್ಲಿ ನಡೆಯಲಿದ್ದು, ಈ ಕುರಿತು ಬೆಂಗಳೂರು ಬುಲ್ಸ್ ತಂಡ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಶೆರಾವತ್, 10 ಸೀಸನ್ನಿಂದ ನಾನು ಬುಲ್ಸ್ ಕೋಚ್ ಆಗಿ ಜೊತೆಗಿದ್ದೇನೆ. ಹೀಗಾಗಿ ನನ್ನ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಬೆಂಗಳೂರಿನ ಅಭಿಮಾನಿಗಳ ಬೆಂಬಲದಿಂದ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ವಿಶ್ವಾಸವಿದೆ ಎಂದರು.
ಬುಲ್ಸ್ ಬಿಡುವುದಿಲ್ಲ:ನನ್ನನ್ನು ಅಭಿಮಾನಿಗಳು ಬಿಡುತ್ತಿಲ್ಲ. ನಾನು ಅಭಿಮಾನಿಗಳನ್ನು ಬಿಡುವುದಿಲ್ಲ ಆದ್ದರಿಂದ ಬೆಂಗಳೂರು ಬುಲ್ಸ್ ತಂಡ ಕುಟುಂಬಂದಂತಾಗಿದೆ. ಆಟಗಾರರು ಬದಲಾಗುತ್ತಿದ್ದಾರೆ, ಕೆಲ ಆಟಗಾರರು ಬಿಟ್ಟು ಹೋಗುತ್ತಿದ್ದಾರೆ. ಆದರೆ ನಾನು ಬುಲ್ಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉತ್ತಮ ಆಟಗಾರರಿದ್ದಾರೆ:ನಾನು ಎಲ್ಲಾ ಆಟಗಾರರನ್ನು ಗಮನಿಸುತ್ತೇನೆ. ಟ್ರೈನಿಂಗ್ ಸಮಯದಲ್ಲಿ ಎಲ್ಲರ ಸಾಮರ್ಥ್ಯ ಗೊತ್ತಾಗುತ್ತಿದೆ. ತಂಡದಲ್ಲಿ 9 ಜನ ಉತ್ತಮ ಆಟಗಾರರು ಇದ್ದಾರೆ. ಮುಂದಿನ ಪಂದ್ಯಾವಳಿಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲರೂ ಉತ್ತಮ ಆಟ ಪ್ರದರ್ಶಿಸಲಿದ್ದಾರೆ. ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದು ಡಿಫೆಂಡರ್, ರೇಡರ್ ಎಲ್ಲರೂ ಬಲಿಷ್ಠವಾಗಿದ್ದಾರೆ ಎಂದರು.