ಕರ್ನಾಟಕ

karnataka

ETV Bharat / state

ಬೆಂಗಳೂರು ಕೊರೊನಾದ ಕೇಂದ್ರಬಿಂದು, ಹೋಂ ಐಸೋಲೇಷನ್​ನಲ್ಲಿ ಶೇ. 93 ಸೋಂಕಿತರು: ಸಚಿವ ಸುಧಾಕರ್

ಕರ್ನಾಟಕದಲ್ಲಿ ಕಳೆದ‌ ಡಿಸೆಂಬರ್ ಮೂರನೇ ವಾರದವರೆಗೆ ಸೋಂಕು ದಾಖಲಾಗುವ​ ಪ್ರಮಾಣ ಕಡಿಮೆ ಇತ್ತು. ಜ.1ರಿಂದ ಜ.11ರವರೆಗೆ ಸುಮಾರು 62,000 ಸಕ್ರಿಯ ಪ್ರಕರಣಗಳಿದ್ದು, ಶೇ. 6ರಷ್ಟು ಜನರು ಆಸ್ಪತ್ರೆ ಸೇರಿದ್ದಾರೆ. ಶೇ.1ರಷ್ಟು ಸಿಸಿಸಿ ಹಾಗೂ ಶೇ. 93ರಷ್ಟು ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಇದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

minister sudhakar
ಸಚಿವ ಸುಧಾಕರ್ ಮಾಧ್ಯಮಗೋಷ್ಠಿ

By

Published : Jan 13, 2022, 4:05 PM IST

ಬೆಂಗಳೂರು:ರಾಜ್ಯದಲ್ಲಿ ಕೋವಿಡ್​ ಸೋಂಕಿನ ಒಟ್ಟು ಸಕ್ರಿಯ ಪ್ರಕರಣದಲ್ಲಿ ಬೆಂಗಳೂರು ಪಾಲು ಶೇ. 75ರಷ್ಟಿದ್ದು, ರಾಜಧಾನಿಯು ಕೊರೊನಾದ ಕೇಂದ್ರಬಿಂದು ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಕಾಸಸೌಧದಲ್ಲಿ ಕೋವಿಡ್​​ ಸ್ಥಿತಿಗತಿ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರನೇ ಅಲೆಯಲ್ಲಿ ಏರಿಕೆ ದರ ಒಂದು ದಿನದಿಂದ ಇನ್ನೊಂದು ದಿನಕ್ಕೆ ದುಪ್ಪಟ್ಟಾಗುತ್ತಿದೆ. ಲಸಿಕೆ ತೆಗೆದುಕೊಳ್ಳದವರ ಮೇಲೆ ಕೊರೊನಾ ಪ್ರಭಾವ ಹೆಚ್ಚಿದೆ. ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ತೆಗೆದುಕೊಂಡಿಲ್ಲ, ಎಲ್ಲರೂ ತಕ್ಷಣ ಪಡೆಯಿರಿ ಎಂದು ಮನವಿ ಮಾಡಿದರು.

ರಾಜ್ಯದೆಲ್ಲೆಡೆ ಶೇ. 36.44 ಏರಿಕೆ:

ಕರ್ನಾಟಕದಲ್ಲಿ ಕಳೆದ‌ ಡಿಸೆಂಬರ್ ಮೂರನೇ ವಾರದವರೆಗೆ ವೈರಸ್​ ಪ್ರಕರಣ ಕಡಿಮೆ ಇತ್ತು. ಜ.11ರಂದು ಶೇ. 10.11 ಇತ್ತು. ಡಿ.28 ಬೆಂಗಳೂರಿನಲ್ಲಿನ ಪ್ರಕರಣ 269 ಹಾಗೂ ಇತರ ಭಾಗಗಳಲ್ಲಿನ ಪ್ರಕರಣ 78 ಸೇರಿ ರಾಜ್ಯದಲ್ಲಿ ಒಟ್ಟು 356 ಕೋವಿಡ್ ಪ್ರಕರಣ ದೃಢವಾಗಿತ್ತು. ಆದರೆ ಜ.5ರಂದು ಬೆಂಗಳೂರಲ್ಲಿ 3,605 ಕೇಸ್ ಹಾಗೂ ಇತರೆಡೆ 641 ಸೋಂಕು ಪ್ರಕರಣಗಳು ದಾಖಲಾಗಿದ್ದವು. ಜನವರಿ 11ರಂದು ಬೆಂಗಳೂರಲ್ಲಿ 10,800 ಸೋಂಕಿತರು ಹಾಗೂ ಇತರ ಭಾಗದಲ್ಲಿ 3,673 ಪ್ರಕರಣ ಕಂಡುಬಂದಿವೆ. ಬೆಂಗಳೂರಲ್ಲಿ ಶೇ. 32.64 ಮತ್ತು ರಾಜ್ಯದ ಇತರೆಡೆ ಶೇ. 36.44ರಷ್ಟು ಏರಿಕೆ ದರವಿದೆ. ಕಳೆದ 15 ದಿನಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ವಿವರಿಸಿದರು.

'ರಾಜ್ಯಕ್ಕೆ ಲಸಿಕೆ ಕೊರತೆ ಇಲ್ಲ'

ರಾಜ್ಯದಲ್ಲಿ ಇದುವರೆಗೆ ಶೇ.50ರಷ್ಟು ಲಸಿಕೆ ನೀಡಲಾಗಿದೆ. 0-15 ವರ್ಷದ ಮಕ್ಕಳ ಬಗ್ಗೆ ನಾವು ಈಗ ಹೆಚ್ಚಿನ ಗಮನ ಹರಿಸಬೇಕು. ಲಸಿಕೆ ತೆಗೆದುಕೊಳ್ಳದವರೆಲ್ಲ ಜಾಗ್ರತೆಯಿಂದಿರಬೇಕು. ಮೂರನೇ ಅಲೆಯಲ್ಲಿ 60 ವರ್ಷದ ವಯೋಮಾನದವರು, ಇತರ ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸಮಸ್ಯೆ ಆಗುತ್ತಿದೆ. ರಾಜ್ಯಕ್ಕೆ ಲಸಿಕೆ ಕೊರತೆ ಇಲ್ಲವೇ ಇಲ್ಲ, ನಮ್ಮ ಬಳಿ 65 ಲಕ್ಷ ಡೋಸ್ ಇದೆ. ಆಸ್ಪತ್ರೆ ದಾಖಲಾತಿಯಂತೆ ಡಿಸೆಂಬರ್ ಮೊದಲ ವಾರದಲ್ಲಿ 3,000 ಸಕ್ರಿಯ ಪ್ರಕರಣ ಇತ್ತು. ಅದರಲ್ಲಿ ಆಸ್ಪತ್ರೆಗೆ ದಾಖಲಾಗಿರುವುದು 23%, ಕೋವಿಡ್ ಕೇರ್ ಸೆಂಟರ್​ನಲ್ಲಿ 3%, ಶೇ. 73ರಷ್ಟು ಹೋಂ‌ ಐಸೋಲೇಷನ್ ಇದ್ದರು. ಜ.1ರಿಂದ ಜ.11ರವರೆಗೆ ಸುಮಾರು 62,000 ಸಕ್ರಿಯ ಪ್ರಕರಣಗಳಿದ್ದು, ಶೇ. 6ರಷ್ಟು ಜನರು ಆಸ್ಪತ್ರೆ ಸೇರಿದ್ದಾರೆ. ಶೇ.1ರಷ್ಟು ಸಿಸಿಸಿ ಹಾಗೂ ಶೇ. 93ರಷ್ಟು ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಇದ್ದಾರೆ ಎಂದು ಸಚಿವರು ತಿಳಿಸಿದರು.

ನಿತ್ಯ ಸರಾಸರಿ ಎರಡುವರೆ ಲಕ್ಷ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗುತ್ತಿದೆ. ಅದರಲ್ಲಿ ಬೆಂಗಳೂರಲ್ಲಿ 1.2 ಲಕ್ಷ ಟೆಸ್ಟ್ ಮಾಡಲಾಗುವುದು, ರಾಜ್ಯದಲ್ಲಿ 265 ಐಸಿಎಂಆರ್ ಅನುಮೋದಿತ ಪ್ರಯೋಗಾಲಯಗಳಿವೆ. ರಾಜ್ಯದಲ್ಲಿ ಒಟ್ಟು 9 ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿಗೆ 1,875 ಸ್ಯಾಂಪಲ್​ಗಳನ್ನು ಒಂದು ಬ್ಯಾಚ್​ನಲ್ಲಿ ಕಳುಹಿಸಲಾಗುತ್ತಿದೆ. ಸದ್ಯ ಫಲಿತಾಂಶ ಬರಲು 3-4 ದಿನಗಳು ಬೇಕು, 24 ತಾಸಿನಲ್ಲೇ ಫಲಿತಾಂಶ ಬರುವಂತೆ ಕ್ರಮಕ್ಕೆ ಸೂಚಿಸಿದ್ದೇವೆ ಎಂದರು.

3.98 ಕೋಟಿ ಎರಡನೇ ಡೋಸ್:

ವೈದ್ಯರ ತಂಡವು 15 ದಿನಗಳಿಗೊಮ್ಮೆ ಎಲ್ಲಾ ಶಾಲೆಗೆ ಹೋಗಿ ರೋಗ ಲಕ್ಷಣ ಇರುವ ಮಕ್ಕಳನ್ನು ಪರಿಶೀಲನೆ ಮಾಡಲಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಅರ್ಹ ಲಸಿಕೆ ಫಲಾನುಭವಿಗಳು ಇದ್ದಾರೆ. ಈವರೆಗೆ ಸುಮಾರು 9 ಕೋಟಿ ಡೋಸ್ ನೀಡಲಾಗಿದೆ. 4.89 ಕೋಟಿ ಮೊದಲ ಡೋಸ್, 3.98 ಕೋಟಿ ಎರಡನೇ ಡೋಸ್ ಆಗಿದೆ. ಒಟ್ಟು ಶೇ. 85.5 ಮಂದಿ ಎರಡೂ ಡೋಸ್ ಹಾಗೂ 1.81 ಲಕ್ಷ ಫ್ರಂಟ್​​ಲೈನ್ ಫಲಾನುಭವಿಗಳಿಗೆ ಬೂಸ್ಟರ್ ಲಸಿಕೆ ಪಡೆದಿದ್ದಾರೆ. ಮೂರನೇ ಅಲೆಯಲ್ಲಿ ಆಮ್ಲಜನಕದ ಅಗತ್ಯತೆ ಇಲ್ಲ ಎಂದು ಸಚಿವ ಸುಧಾಕರ್​​ ತಿಳಿಸಿದರು.

ಇದನ್ನೂ ಓದಿ:ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆ ಅರ್ಧಕ್ಕೆ​ ಮೊಟಕು

ABOUT THE AUTHOR

...view details